ಖಾಯಂ ಓದುಗರು..(ನೀವೂ ಸೇರಬಹುದು)

10 December 2015

ಇನ್ನೂ ಮುಂದೈತೆ ಮಾರಿ ಹಬ್ಬ..

ರಾಜಸ್ಥಾನದಲ್ಲಿ ಹುಟ್ಟಿದೆ ಎನ್ನಲಾದ ವಿಚಿತ್ರ ಆಕಾರದ ಮಗು ನೋಡಿ ನನಗನ್ನಿಸಿದ್ದು...
ಮಕ್ಕಳು ಈ ರೀತಿ ಜನಿಸುವುದು ಅಪರೂಪ. ಅಷ್ಟೊಂದು ಅಶ್ಚರ್ಯಪಡುವಂತಹ ಘಟನೆಯೇನಲ್ಲ. ಮುಂದೆ ಇಂತಹ ಘಟನೆಗಳು ಹೆಚ್ಚಾದರೂ ಮತ್ತೆ ಆಶ್ಚರ್ಯಪಡುವ ಅವಶ್ಯಕತೆ ಇಲ್ಲ. ಇದಕ್ಕೆ ಕಾರಣರು ನಾವುಗಳೇ.. ಮಗು ಹೊಟ್ಟೆಯಲ್ಲಿದ್ದಾಗ ಸೇವಿಸಬೇಕಾದ ವಿಟಮಿನ್ ಮಾತ್ರೆಗಳ ಅತಿಯಾದ ಸೇವನೆಯಿಂದ, ರಾಸಾಯನಿಕಯುಕ್ತ ರಸಗೊಬ್ಬರದಿಂದ ಬೆಳೆದ ಅಹಾರವನ್ನು ಸೇವಿಸುವುದರಿಂದ, ರಾಸಾಯನಿಕಯುಕ್ತ ನೀರು ಸೇವನೆಯಿಂದಲೂ ಸಹ ಈ ರೀತಿ ಅನಿಮಿಯತ ಮಗುವಿನ ಬೆಳವಣಿಗೆಗೆ ಕಾರಣಗಳು.
ಸ್ನೇಹಿತರೇ, ನಾವು ಈಗಲಾದರೂ ಎಚ್ಚೆತ್ತುಕೊಳ್ಳಬೇಕು. ನಮ್ಮ ದೇಶದಲ್ಲಿ ನಾವು ಸೇವಿಸುತ್ತಿರುವ ಆಹಾರವು ಕೆಳದರ್ಜೆಮಟ್ಟದ್ದಾಗಿದೆ. ಉತೃಷ್ಟ ಆಹಾರಗಳೆಲ್ಲವೂ ವಿದೇಶಕ್ಕೆ ರಫ್ತಾಗುತ್ತಿವೆ. ಕಳೆದ ವರುಷ ನಮ್ಮ ದೇಶದ ಮಾವಿನ ಹಣ್ಣು ಅತೀ ಹೆಚ್ಚಿನ ರಾಸಾಯನಿಕ ಅಂಶ ಇದ್ದುದರಿಂದ ದುಬೈ ಮುಂತಾದ ದೇಶಗಳಿಂದ ತಿರಸ್ಕರಿಸಲ್ಪಟ್ಟಿತು. ಅದೇ ಹಣ್ಣನ್ನು ನಾವೆಲ್ಲರೂ ಚಪ್ಪರಿಸಿಕೊಂಡು ತಿಂದೆವು. ಮ್ಯಾಗಿಯಲ್ಲಿ ಅತೀ ಹೆಚ್ಚು ರಾಸಾಯನಿಕ ಅಂಶವಿದೆ ಎಂದು ನಮ್ಮ ದೇಶದ ಲ್ಯಾಬೊರೇಟರಿಗಳಲ್ಲಿ ಸಾಬೀತಾಯಿತು. ಆದರೆ ವಿದೇಶದಲ್ಲಿನ ಲ್ಯಾಬ್ ಗಳಲ್ಲಿ ಮ್ಯಾಗಿ ಪಾಸಾಯಿತು. ಇಷ್ಟು ಸಾಕಲ್ಲವೇ ನಮ್ಮ ಆಹಾರದ ಗುಣಮಟ್ಟಕ್ಕೆ ಸಾಕ್ಷಿ..?
ಇದಕ್ಕೆಲ್ಲ ಪರಿಹಾರವೆಂದರೆ, ಸಾವಯುವ ಆಹಾರದ ಬೆಳೆಗಳನ್ನೇ ಸೇವಿಸಿ ಆರೋಗ್ಯದಿಂದಿರುವುದು. ಬೆಂಗಳೂರಿನಂತಹ ದೊಡ್ಡ ಸಿಟಿಗಳಲ್ಲಿ ಇಂದು ಅನೇಕ ಸಾವಯುವ ಮಳಿಗೆಗಳು ತಲೆಯೆತ್ತಿ ಯಶಸ್ವಿಯಾಗಿ ವ್ಯಾಪಾರ ಮಾಡುತ್ತಿವೆ. ಆದರೆ, ಅದು ಶ್ರೀಮಂತರಿಗಷ್ಟೆ.. ಅಲ್ಲಿ ಅತಿ ಹೆಚ್ಚು ದರವಿರುತ್ತದೆ. ನಮ್ಮಂತಹ ಮಧ್ಯಮ ವರ್ಗ ಮತ್ತು ಬಡವರಿಗೆ ಕೈಗೆಟುಕುವುದಿಲ್ಲ.
ನಾವೇ ನಮ್ಮ ಮನೆಯ ಮೇಲ್ಛಾವಣಿಯಲ್ಲಿ, ಹಿತ್ತಲಿನಲ್ಲಿ, ಹೊಲಗಳಲ್ಲಿ ಸಾವಯುವ ಪದ್ಧತಿಯಿಂದ ತರಕಾರಿ/ಆಹಾರ ಧಾನ್ಯಗಳನ್ನು ಬೆಳೆಯೋಣ. ರೈತರುಗಳಿಗೆ ಸಾವಯುವ ಪದ್ಧತಿಯ ಕುರಿತು ತಿಳುವಳಿಕೆ ನೀಡೋಣ. ಇಷ್ಟಾದರೂ ಒಳ್ಳೆಯ ಕೆಲಸ ಮಾಡೋಣ. ಹೊಸ ಸಾವಯುವ ಕ್ರಾಂತಿ ಪ್ರಾರಂಭಿಸಲು ನಮ್ಮಗಳ ಅಳಿಲುಸೇವೆ ನೀಡೋಣ.
ಯಾಕೆಂದರೆ, ಮುಂದೆ ಹುಟ್ಟುವ ನಮ್ಮ ಮಕ್ಕಳು, ಮೊಮ್ಮಕ್ಕಳು, ಮರಿಮಕ್ಕಳು ಏಲಿಯನ್ ಗಳ ಹೋಲಿಕೆಯಾಗಬಾರದಲ್ಲವೇ??
ಪ್ರೀತಿಯಿಂದ
ಶಿವಶಂಕರ ವಿಷ್ಣು ಯಳವತ್ತಿ

18 January 2015

ಯಳವತ್ತಿ ಕುಡಿಗಥೆ:-


ಹೊಸದಾಗಿ ಮದುವೆಯಾದ ಗೆಳತಿ ಆಫೀಸಿಗೆ ತಡವಾಗಿ ಬಂದಿದ್ದಳು..
ಯಾಕೆ ಲೇಟು? ಎಂಬ ಇವಳ ಪ್ರಶ್ನೆಗೆ, ನನ್ನವನು ಕರಡಿ ಥರಾ ಕಣೇ ಅಂದಳು..
ಅದಕ್ಕೂ ಇದಕ್ಕೂ ಏನೇ ಸಂಬಂಧ? ಎಂಬ ಮರು ಪ್ರಶ್ನೆಗೆ, 
ಅವನ ಅಪ್ಪುಗೆ ಕರಡಿಯಪ್ಪುಗೆ ಎಂದು ಹೇಳಿ ಕಣ್ಷು ಹೊಡೆದಾಗ, ಇನ್ನೂ ಮದುವೆಯಾಗದ ಇವಳು ನಾಚಿ ನೀರಾದಳು.

08 January 2015

ಅಷ್ಟಕ್ಕೂ ನಮ್ಮ ರೈತರಿಗೆ ಬೇಕಾಗಿರುವುದು ಏನು??


(ಲೇಖನ ಬರೆಯುವ ಮೊದಲೇ ನಾನು ಹೇಳಿಬಿಡುತ್ತೇನೆ.. ನಾನು ಯಾವುದೇ ಪಕ್ಷದವನಲ್ಲ.. ನಾನೊಬ್ಬ ದೇಶಾಭಿಮಾನಿ ಎಂದು ಹೇಳಲಷ್ಟೇ ಸಾಧ್ಯ.. )
ಪ್ರತಿ ಚುನಾವಣೆಯಲ್ಲಿ ಎಲ್ಲ ರಾಜಕೀಯ ಪಕ್ಷಗಳು ರೈತರನ್ನೇ ಪ್ರಮುಖ ವೋಟ್ ಬ್ಯಾಂಕ್ ಎಂದು ಗುರಿಯಿರಿಸಿಕೊಂಡು ಹಲವಾರು ಆಶ್ವಾಸನೆಗಳನ್ನು ಕೊಡುತ್ತವೆ. ಅತಿ ಕಡಿಮೆ ದರದಲ್ಲಿ ಸಾಲ, ಹಿಂದಿನ ಸಾಲ ಮನ್ನಾ ಘೋಷಣೆ, ಕಡಿಮೆ ದರದಲ್ಲಿ ರಾಸಾಯನಿಕ ಗೊಬ್ಬರ, 24 ತಾಸು ವಿದ್ಯುತ್..ಇತ್ಯಾದಿ ಇತ್ಯಾದಿ.
ಹಲವು ಪಕ್ಷಗಳು ತಮಗೆ ಮತ ನೀಡಿದ ರೈತ ಬಂಧುಗಳಿಗೆ ಈ ಕೊಡುಗೆಗಳನ್ನು ಕೊಟ್ಟಿದ್ದು ಕೂಡಾ ವಾಸ್ತವ. ಯಾವುದೇ ಬಜೆಟ್ ಮಂಡಿಸುವಾಗಲೂ ಸಹ ಸರಕಾರವು ರೈತರಿಗೆ ಹಲವಾರು ಕೊಡುಗೆಗಳನ್ನು ಪ್ರಕಟಿಸಿ ಅವರನ್ನು ಮೇಲೆತ್ತಲು ಪ್ರಯತ್ನಿಸುತ್ತಿದೆ. ಹಿಂದಿನ ಮುಖ್ಯ ಮಂತ್ರಿಯಾಗಿದ್ದ ಬಿ.ಎಸ್. ಯಡಿಯೂರಪ್ಪನವರಂತೂ ಒಂದು ಹೆಜ್ಜೆ ಮುಂದು ಹೋಗಿ ಕೃಷಿ ಬಜೆಟ್ ನ್ನು ಮಂಡಿಸಿದರು. ಈಗಿನ ಮಾನ್ಯ ಮುಖ್ಯಮಂತ್ರಿಗಳಾದ ಸಿದ್ಧರಾಮಯ್ಯರವರು ರೈತರ ಸಾಲ ಮನ್ನಾ ಮಾಡಿ ಪುನಃ ಶೇ 0 ರಷ್ಟು ದರದಲ್ಲಿ ಸಾಲವನ್ನು ವಿತರಿಸುವ ಕೈಂಕರ್ಯ ಕೈಗೊಂಡಿದ್ದಾರೆ.
ಆದರೆ, ನಮ್ಮ ಮುಂದೆ ಇರುವ ಪ್ರಶ್ನೆ ಏನೆಂದರೆ, ಇಷ್ಟೆಲ್ಲಾ ಅನುಕೂಲ ಮಾಡಿಕೊಟ್ಟರೂ ಕೂಡಾ ನಮ್ಮ ರೈತರುಗಳ ಬವಣೆ ತಪ್ಪಿಲ್ಲ. ಮತ್ತದೇ ರಸ್ತೆ ತಡೆಗಳು, ಪ್ರತಿಭಟನೆಗಳು, ಬೆಂಬಲ ಬೆಲೆಗಾಗಿ ಹೋರಾಟ ಇತ್ಯಾದಿಗಳನ್ನು ನೋಡುತ್ತಾ ಕೇಳುತ್ತಾ ಇರುತ್ತೇವೆ. ಇದೆಲ್ಲಾ ಹೀಗ್ಯಾಕೆ???
ಇಷ್ಟೆಲ್ಲಾ ಸಮಸ್ಯೆಗಳ ಮೂಲವನ್ನು ನಾವು ಹುಡುಕಿ ತೆಗೆದು ಅದನ್ನು ನಿವಾರಿಸುವ ಪ್ರಯತ್ನ ಖಂಡಿತಾ ಮಾಡಬೇಕಿದೆ.
ಈ ಹಿಂದೆ ರಾಜಕಾರಣಿಯೊಬ್ಬರು (ಅವರ್ಯಾರೆಂದು ಹೇಳಲು ಸಾಧ್ಯವಿಲ್ಲ.. ಹೇಳಿದರೆ, ಒಂದು ಪಕ್ಷದ ಪರವಾಗಿರುವವನು ಎಂಬ ಬಿರುದು ಬಾವಲಿಗಳು ಸುಲಭವಾಗಿ ಸಿಗುವ ಭಯವಿದೆ) ತಾವು ಮುಖ್ಯ ಮಂತ್ರಿಯಾಗಿ ಪದಗ್ರಹಣಗೊಂಡ ಕೆಲವು ದಿನಗಳ ನಂತರ ರೈತ ಮುಖಂಡರುಗಳು ಕೃಷಿ ಕೆಲಸಕ್ಕಾಗಿ ತಮಗೆ ದಿನಕ್ಕೆ 5(?) ತಾಸು ಎರಡು ಫೇಸ್ ವಿದ್ಯುತ್ ನೀಡಬೇಕೆಂದು ಮನವಿ ಸಲ್ಲಿಸಿದರು. ರೈತರು ಶೇ. 90 ರಷ್ಟು ವಿದ್ಯುತ್ತನ್ನು ಕೊಳವೆ ಬಾವಿಗಳ ಮೂಲಕ ಅಂತರ್ಜಲ ನೀರನ್ನು ಮೇಲಕ್ಕೆತ್ತಿ ಬೆಳೆಗಳಿಗೆ ನೀರನ್ನು ಹಾಯಿಸಲು ಉಪಯೋಗಿಸುತ್ತಿದ್ದರು. 
ಅವರ ಮನವಿಯನ್ನು ಪರಿಶೀಲಿಸಿದ ಮುಖ್ಯ ಮಂತ್ರಿಗಳು ಇದು ಸಾಧ್ಯವಿಲ್ಲ ಎಂದುಬಿಟ್ಟರು. ವಿಚಲಿತರಾದ ರೈತ ಮುಖಂಡರುಗಳು, ವಿದ್ಯುತ್ ಇಲ್ಲದಿದ್ದರೆ ನೀರಿಲ್ಲ. ನೀರಿಲ್ಲದಿದ್ದರೆ ಬೆಳೆಯಿಲ್ಲ. ಬೆಳೆಯಿಲ್ಲದಿದ್ದರೆ ನಾವು ಬದುಕುವುದು ಹೇಗೆ ಎಂದು ಕೇಳಿದರು. ಆಗ ಮುಖ್ಯಮಂತ್ರಿಗಳು ಹೇಳಿದರು, ನಿಮಗೆ ಬೇಕಾಗಿರುವುದು ನೀರು.. ನೀರು ಕೇಳಿ ಕೊಡಲು ಪ್ರಯತ್ನಿಸುವೆ, ಆದರೆ ವಿದ್ಯುತ್ ಮಾತ್ರ ಸಾಧ್ಯವಿಲ್ಲ ಎಂದು ಖಡಾಖಂಡಿತವಾಗಿ ಹೇಳಿಬಿಟ್ಟರು.
ಸಿಟ್ಟುಗೊಂಡ ರೈತಮುಖಂಡರುಗಳು ಆ ಮುಖ್ಯ ಮಂತ್ರಿಗಳ ವಿರುದ್ಧ ರಾಜ್ಯಾದ್ಯಂತ ಪ್ರತಿಭಟನೆಗಳನ್ನು ಕೈಗೊಂಡರು. ಪ್ರತಿಕೃತಿಗಳನ್ನು ಸುಟ್ಟರು. ಆದರೂ ಮುಖ್ಯಮಂತ್ರಿಗಳು ತಮ್ಮ ನಿಲುವನ್ನು ಸಡಿಲಗೊಳಿಸಲಿಲ್ಲ. ರೈತರು ಎಷ್ಟು ದಿನ ಪ್ರತಿಭಟನೆ ಮಾಡಿಯಾರು...?? ಕೊನೆಗೆ ಒಂದು ದಿನ ಪುನಃ ಮುಖ್ಯ ಮಂತ್ರಿಗಳನ್ನು ಭೇಟಿಯಾಗಿ, ತಮಗೆ ನೀರು ಕೊಡಲು ಕೇಳಿದರು..
ಅಷ್ಟರಲ್ಲಾಗಲೇ ಮುಖ್ಯಮಂತ್ರಿಗಳು ಇವರ ಆಗಮನವನ್ನೇ ನಿರೀಕ್ಷಿಸುತ್ತಾ ಕೂತಿದ್ದರು. ರೈತರ ಮಾತುಗಳನ್ನು ಕೇಳಿ ಸಂತೋಷಗೊಂಡ ಅವರು ನಾನು ನಿಮಗೆ ನೀರು ಕೊಡಬಲ್ಲೆ. ಅದಕ್ಕೆ ರೂಪು ರೇಷೆಗಳು ಸಿದ್ಧವಾಗಿದೆ. ತಮ್ಮೆಲ್ಲರಿಂದ ಒಂದು ಸಹಾಯವಾಗಬೇಕು ಎಂದು ಕೇಳಿದರು.. ಅದೇನೆಂದರೆ, ಅವರು ತಯಾರಿಸಿದ ಯೋಜನೆಯು ಎರಡು ನದಿಗಳನ್ನು ಸೇರಿಸಿ, ಕಾಲುವೆಗಳ ಮೂಲಕ ನೀರು ಹರಿಸುವುದಾಗಿತ್ತು. ಅದಕ್ಕೆ ಕಾಲುವೆಗಳನ್ನು ನಿರ್ಮಿಸಲು ಭೂಮಿಯ ಅವಶ್ಯಕತೆ ಇದ್ದು, ಭೂ ಸ್ವಾಧೀನಕ್ಕೊಳಪಡಿಸಬೇಕಾಗಿತ್ತು. ರೈತರು ತಾವೇ ಮುಂದು ಬಂದು ಜಮೀನನ್ನು ನೀಡಿದಲ್ಲಿ, ಜಮೀನಿಗೆ ಮಾರುಕಟ್ಟೆ ಮೌಲ್ಯದಷ್ಟು ಮತ್ತು ಒಪ್ಪಿಗೆ ಆಧಾರದ ಮೇಲೆ ಪರಿಹಾರವನ್ನು ನೀಡುವುದಾಗಿ, ನಂತರ ನ್ಯಾಯಾಲಯಕ್ಕೆ ಹೋಗಬಾರದಾಗಿ ವಿನಂತಿಸಿದರು. ಇದಕ್ಕೆ ರೈತರುಗಳು ಸಹ ಸಂತೋಷದಿಂದ ಒಪ್ಪಿಗೆ ನೀಡಿದರು. ನಂತರ ಜರುಗಿದ್ದು ಇತಿಹಾಸ. ಅತಿ ವೇಗವಾಗಿ ಕಾಲುವೆಗಳು ಯಾವುದೇ ಭೂಸ್ವಾಧೀನದ ತಲೆ ನೋವಿಲ್ಲದೇ ನಿರ್ಮಾಣಗೊಂಡು, ರೈತರು ದಿನದ 24 ತಾಸು ಕೃಷಿ ಭೂಮಿಗೆ ನೀರನ್ನು ವಿದ್ಯುತ್ ಸಹಾಯವಿಲ್ಲದೇ ಪಡೆಯುತ್ತಿದ್ದಾರೆ. ಅಷ್ಟೇ ಅಲ್ಲ. ವಿದ್ಯುತ್ ನ್ನು ಕೂಡಾ 24 ತಾಸು 3 ಫೇಸ್ ಗಳಲ್ಲಿ ಪಡೆಯುತ್ತಿದ್ದಾರೆ.
ನಾನು ಈ ಉದಾಹರಣೆ ನೀಡಲು ಕಾರಣವೇನೆಂದರೆ, ಎಲ್ಲರೂ ಸಮಸ್ಯೆಯನ್ನು ಬಗೆಹರಿಸಲು ಉತ್ಸುಕತೆ ತೋರುತ್ತಾರೆ ವಿನಃ ಸಮಸ್ಯೆಯ ಮೂಲವನ್ನು ಶೋಧಿಸುವುದರಲ್ಲಿ ವಿಫಲರಾಗುತ್ತಿದ್ದಾರೆ. ಸಮಸ್ಯೆಯನ್ನು ಬಗೆಹರಿಸಿದರೆ ಅದು ಕೇವಲ ತಾತ್ಕಾಲಿಕವಾಗುತ್ತದೆಯೇ ಹೊರತು ಶಾಶ್ವತ ಪರಿಹಾರವಾಗುವುದಿಲ್ಲ. ಇದನ್ನಷ್ಟೇ ನಾನು ಹೇಳ ಹೊರಟಿದ್ದು..
ಸಂಬಂಧಿಸಿದವರು ಈ ಬಗ್ಗೆ ತಮ್ಮ ಗಮನವನ್ನು ಹರಿಸಿ ಸೂಕ್ತ ಕ್ರಮ ಕೈಗೊಳ್ಳಲು ವಿನಂತಿ.Facebook Wall ಗಳಲ್ಲಿನ ಉವಾಚ

1) ಯಳವತ್ತಿ ಕುಡಿಗಥೆ:- “ನಿನ್ನ ಬಗ್ಗೆ ನನಗೆ ಈಗ ಕೇವಲ ಸ್ನೇಹಿತನೆಂಬ ಭಾವವಿದೆಯೇ ಹೊರತು ಬೇರಾವ ಭಾವನೆಗಳಿಲ್ಲ. ಹಿಂದೆಂದೂ ಪಿ.ಯು.ಸಿ. ಯಲ್ಲಿ ಏನೂ ಅರಿಯದ ವಯಸ್ಸಿನಲ್ಲಿ ಆಕರ್ಷಣೆಗೆ ಒಳಗಾಗಿ ಪ್ರೇಮ ಪತ್ರಗಳು ವಿನಿಮಯವಾಗಿದ್ದು ನಿಜವಿದ್ದರೂ, ಅದೆಲ್ಲಾ ಹಳೆಯ ಕಥೆ. ನಾನು ಈಗ ಇಂಜಿನೀಯರಿಂಗ್ ಮುಗಿಸಿ ಕೆಲಸಕ್ಕೆ ಸೇರಲು ಹೋಗ್ತಾ ಇದ್ದೀನಿ. ನೀನು ಏನಾದರೂ ಸಾಧನೆ ಮಾಡು. ನನ್ನ ಬಗ್ಗೆ ಇಲ್ಲದ ಆಲೋಚನೆಗಳನ್ನೆಲ್ಲಾ ಮನಸಲ್ಲಿಟ್ಟುಕೊಂಡು ಕನಸು ಕಾಣಬೇಡ” ಎಂದು ಅತ್ತೆಯ ಮಗಳು ನಿರ್ಭಾವುಕಳಾಗಿ ಹೇಳಿದಳು. ಅಷ್ಟರಲ್ಲಿ ಬಸ್ಸು ಬಂತು. ಏನೂ ಮಾತನಾಡದೇ ಮೂಕ ಪ್ರಾಣಿಯ ಹಾಗೆ ಮನದೊಳಗೆ ಬೇಗುತ್ತಾ, ಅವಳ ಲಗ್ಗೇಜನ್ನು ಬಸ್ಸಿನಲ್ಲಿರಿಸಿ, ಕಂಡಕ್ಟರ್ ಗೆ ಹೇಳಿ ಬೆಂಗಳೂರಿಗೆ ಟಿಕೆಟ್ ತೆಗೆಸಿ ಅವಳ ಕೈಗಿತ್ತನು. ಬಸ್ಸು ಹೊರಟಿತು. "ರಸ್ತೆಯಂಚಿನಲ್ಲಿ ನಿಂತು ಜೋರಾಗಿ ಕೈ ಬೀಸುತ್ತಿದ್ದರೆ, ಬಸ್ಸು ಮೆಲ್ಲನೆ ಸಾಗುತ್ತಿತ್ತು.. ಅವಳ ಮನಸ್ಸು ನಿರಾಳವಾಗಿದ್ದರೆ, ಇಲ್ಲೊಂದು ಮನಸ್ಸಿನಲ್ಲಿ ಸುನಾಮಿಯೊಂದು ಅಪ್ಪಳಿಸಿತ್ತು.

2) ಯಳವತ್ತಿ ಟ್ವೀಟ್:-

ಒಂದೈದು ಕುಡಿಗಥೆಗಳನ್ನು ಕುಡಿಗಥೆಗಳನ್ನು ಬರೆದು ಕಳುಹಿಸಿ ಎಂದರು.
"5-ಕುಡಿಗಥೆಗಳು" ಎಂದು ಬರೆದು ಕಳಿಸಿದೆ. ಯಾಕೋ ಪೇಮೆಂಟ್ ಕಳುಹಿಸಲೇ ಇಲ್ಲ.


3) ಯಳವತ್ತಿ ಕವನ:-
ಇಂದು ಅವಳಿಲ್ಲ
ಮಳೆಯಿದೆ.
ಅವಳಿಲ್ಲ
ಛಳಿಯಿದೆ.
ಅವಳಿಲ್ಲದಾಗಲೇ
ಬಿಸಿ ಬಿಸಿ
ಬೇಕೆನಿಸಿದೆ.
ಅವಳಿಲ್ಲದಾಗಲೇ
ಮನಸು ನೆನಪಿಸಿದೆ..
ಅದರ ರುಚಿ
ಹತ್ತಿದೊಡನೇ
ಅದೇ ಬೇಕೆಂದು
ಕಾಡಿಸುತಿದೆ.
ಅವಳಿಲ್ಲದಾಗಲೇ
ಚಳಿಯು
ಆವರಿಸುತಿದೆ.
ಅವಳ ನೆನಪು
ಮೂಡಿಸುತಿದೆ..
ಎಲ್ಲಿದ್ದೀಯೇ ನನ್ನವಳೇ..
ನನ್ನ ಆಸೆಯ ಪೂರೈಸಲೋಸುಗ
ಬಿಸಿ ಬಿಸಿ ಮಿರ್ಚಿ ಬಜ್ಜಿ ಮಾಡಿಕೊಡುವೆಯಾ???
ಐ ಲವ್ ಯೂ.ಬಿಸಿ ಬಿಸಿ ಮಿರ್ಚಿ ಬಜ್ಜಿ..


4) ಗೋವಾಕ್ಕೆ ಹೋಗಿದ್ದೆ,
ನಿನ್ನಿಷ್ಟದ ಸಮುದ್ರವಿತ್ತು
ಸಾಕಷ್ಟು ಮರಳಿತ್ತು 
ಎತ್ತ ನೋಡಿದರತ್ತ ನೀರಿತ್ತು 
ಅಲೆಗಳ ಜೊತೆ ಆಟವಾಡಲು ಸಮುದ್ರವಿತ್ತು
ನಿನ್ನ ಜೊತೆಯಾಡುವ ಆಟವನ್ನು ಸೆರೆ ಹಿಡಿಯಲು ಚಂದ್ರನ ಬೆಳಕಿತ್ತು
ಅಂದು ಎಲ್ಲಾ ಇತ್ತು, ಆದರೆ, 
ನೀನಿಲ್ಲವೆಂಬ ಕೊರತೆ ಮಾತ್ರ ಕಾಡುತ್ತಿತ್ತು...

22 November 2014

5000 mAh ಬ್ಯಾಟರಿ ಹೊಂದಿರುವ ತೆಳು ಮತ್ತು ಕಡಿಮೆ ತೂಕದ Android ಫೋನ್

ಎಲ್ಲಾ Android ಮೊಬೈಲ್ ಬ್ಯಾಟರಿಗಳ ತಲೆ ಮೇಲೆ ಕುಕ್ಕಲು ಜಿಯೋನಿ ಈ ಮೊಬೈಲ್ ಬಿಡುಗಡೆ ಮಾಡಿದೆ. ನಾನು ಜಿಯೋನಿ ಎಂ-2 ಉಪಯೋಗಿಸುತ್ತಿದ್ದೇನೆ. ಇದಕ್ಕೂ ಅದಕ್ಕೂ ವ್ಯತ್ಯಾಸವೇನೆಂದರೆ, ಜಿ ಎಂ2 ಮೊ. 4200 ಎಂ.ಎ.ಎಚ್. ಬ್ಯಾಟರಿ ಹೊಂದಿದ್ದರೆ, ಎಂ-3 ಮೊ. 5000 ಎಂ.ಎ.ಎಚ್. ಬ್ಯಾಟರಿ ಇದೆ. ಮತ್ತು ತೂಕದಲ್ಲಿ ಎಂ-3 ಕಡಿಮೆ ಮತ್ತು ಸ್ಲಿಮ್.. ಯಾರಾದರೂ ಹೊಸ ಮೊಬೈಲ್ ತಗೊಳ್ಳೋರಿದ್ದರೆ, ಇದನ್ನೇ ತಗೊಳ್ಳಿ. ಇನ್ನುಳಿದ ಫೀಚರ್ ಗಳಿಗಾಗಿ ಈ ಕೊಂಡಿಯನ್ನು ಕ್ಲಿಕ್ಕಿಸಿ.

19 August 2014

ಪ್ರೇಯಸಿ ಎಂಬ ಗೆಳತಿಗೆ.. ಒಂದು ಪ್ರೇಮ ಪತ್ರ.

ಪ್ರೇಯಸಿ ಎಂಬ ಗೆಳತಿಗೆ..
ಹೇ ಹುಡುಗಿ.. ಹಿಂದಿನ ನೆನಪುಗಳು ಎಂಥಾ ವಿಚಿತ್ರ ಅಲ್ವಾ? ಕೆಲವೊಮ್ಮೆ ಕೋಪವನ್ನು
ತರಿಸಿದರೆ, ಕೆಲವೊಮ್ಮೆ ನಾಚಿ ನೀರಾಗುವಂತೆ ಮಾಡುತ್ತವೆ ಈ ನೆನಪುಗಳು.. ಅದರಲ್ಲೂ
ಮುಖ್ಯವಾಗಿ ನನ್ನ ನಿನ್ನ ಪ್ರೀತಿಯ ಮುದ್ದು ನೆನಪುಗಳು.. ನಿನಗೆ ನೆನಪಿದ್ಯಾ ಪ್ರೀತಿಯ
ಪ್ರಾಂಭದಲ್ಲಿ ನಾವು ಮೊದಲು ಒಂದು ಅರ್ಧ ಗಂಟೆಯೂ ಕೂಡಾ ಮಾತಾಡದೇ ಇದ್ದರೆ ಏನೋ ಕಳಕೊಂಡ
ಹಾಗೆ ಆಡ್ತಿದ್ವಿ.. ಎಂಥಾ attachment ಇತ್ತು.. ಬೆಳಿಗ್ಗೆ ಎದ್ದರೆ, ಗುಡ್
ಮಾರ್ನಿಂಗ್ ನಿಂದ ಹಿಡಿದು, ಕಾಫಿ ಆಯ್ತಾ? ಸ್ನಾನ ಆಯ್ತಾ? ಟಿಫಿನ್ ಆಯ್ತಾ? ಕೆಲಸಕ್ಕೆ
ಹೊರಟೆಯಾ? ಪ್ರತಿಯೊಂದು ವರದಿಯೂ ಕೂಡಾ ಅರೆ ಕ್ಷಣದಲ್ಲಿ ನನ್ನ-ನಿನ್ನಲ್ಲಿಗೆ
ರವಾನೆಯಾಗಿಬಿಡ್ತಿತ್ತು.. ಅಂಗಡಿಗೆ ಹೋದಾಗ ದಾರಿಯಲ್ಲಿ ಕಂಡ ಕಾಲಿಲ್ಲದ ಅಂಗವಿಕಲನಿಂದ
ಹಿಡಿದು, ತರಕಾರಿಯನ್ನು ಕೇಜಿಗಟ್ಟಲೆ ತುಂಬಿಸಿಕೊಳ್ಳುತ್ತಿದ್ದ ಧಡೂತಿ
ಹೆಂಗಸಿನವರೆಗೆ, ಎಲ್ಲಾ ವಿಷಯಗಳನ್ನು ಶೇರ್ ಮಾಡ್ಕೋತಿದ್ವಿ. ನನ್ನ ಜೀವನದ
ಪ್ರತಿಯೊಂದು ಕ್ಷಣಗಳನ್ನು ನಿನಗಾಗಿ ಮೀಸಲಿಟ್ಟುಬಿಟ್ಟಿದ್ದೆ. ನೀನೂ ಕೂಡಾ ಹಾಗೇನೇ,
ನಾನು ಫೋನು ಮಾಡದಿದ್ದರೂ ನೀನಂತೂ ಖಂಡಿತ ಮಾಡ್ತಿದ್ದೆ..
ನೆನಪಾಗುತ್ತಿದೆಯಾ ಹುಡುಗಿ? ಒಮ್ಮೆ ನಮ್ಮ ಮನೆಯಲ್ಲಿ ಎಲ್ಲರೂ ಇದ್ದಾಗ ರಾತ್ರಿ ನಾನು
ನಿಂಜೊತೆ ಮಾತಾಡೋಕ್ಕಾಗಲ್ಲ ಅಂತಾ ಹೇಳಿದ್ರೂ ಕೂಡಾ ನೀನು ನನ್ನ ಜೊತೆ ಮಾತನಾಡಲೇಬೇಕು
ಅಂತಾ ಹಠಕ್ಕೆ ಬಿದ್ದದ್ದು, ನಾನು ರೂಮಿನ ಬಾಗಿಲಿನ ಸಂದುಗಳಿಗೆ ಬಟ್ಟೆಯನ್ನು ತುರುಕಿ,
ಫ್ಯಾನ್ ಸದ್ದಿನ ಕೆಳಗೆ ನಾಲ್ಕೈದು ಬೆಡ್ ಶೀಟ್ ಗಳನ್ನು ಹೊದ್ದುಕೊಂಡು ರಾತ್ರಿಯೆಲ್ಲಾ
ಮಾತಾಡಿದ್ದೆ. ಅವತ್ತು ರಾತ್ರಿ ನಾವು ಪ್ರತಿಯೊಂದು ವಿಷಯವನ್ನೂ ಹಂಚಿಕೊಂಡೆವು. ನಿನ್ನ
ಮನೆ ಲ್ಯಾಂಡ್ ಲೈನಿಗೆ ಮಿಸ್ಡ್ ಕಾಲ್ ಮಾಡುತ್ತಿದ್ದ ಆ ನಿನ್ನ ಅಜ್ಞಾತ ಪ್ರೇಮಿಯ
ಬಗ್ಗೆ, ನಿನಗೆ ಪ್ರಪೋಸ್ ಮಾಡಿ ಪೆಚ್ಚು ಮೋರೆ ಹಾಕಿಕೊಂಡು ಹೋದ ಫ್ಯಾಮಿಲಿ ಫ್ರೆಂಡ್
ಬಗ್ಗೆ.. ನೀನು ನಿಮ್ಮೂರಿನ ಗಲ್ಲಿಗಳಲ್ಲಿ ಜೋರಾಗಿ ಓಡಿಸ್ಕೊಂಡು ಹೋಗ್ತಿದ್ದ ಸ್ಕೂಟಿಯ
ಬಗ್ಗೆ... ಎಲ್ಲದರ ಬಗ್ಗೆ ಮಾತನಾಡುತ್ತಾ, ಕೊನೆಗೆ ಮುತ್ತಿನ ಟಾಪಿಕ್ ನ ನಾನು
ತೆಗೆದಾಗ ನೀನು ಹುಸಿ ಕೋಪ ಮಾಡಿಕೊಂಡು ಫೋನ್ ಕಟ್ ಮಾಡಿದ್ದು.. ಮತ್ತೆ ನಾನು ಫೋನ್
ಮಾಡಿ, ನಾನು ನಿಂಗೆ ನೂರೈವತ್ತು ಸಾರಿ sorry ಕೇಳಿದ್ದು, ಎಲ್ಲವೂ ನೆನಪಾಗುತ್ತಿದೆ.
ಪ್ರೀತಿಯ ಬಾಹುಗಳಿಗೆ ನಮ್ಮಿಬ್ಬರನ್ನು ಅರ್ಪಿಸಿಕೊಂಡು ಕೊನೆಗೆ ನಾವಿಬ್ಬರೂ
ಒಬ್ಬರೊನ್ನೊಬ್ಬರೂ ಬಿಟ್ಟಿರಲಾರದ ಹಂತಕ್ಕೆ ಬಂದಾಗ, ಮಾರನೇ ದಿನವೇ ನಿನ್ನ ಮದುವೆ
ಮಾಡಿಕೊಂಡು ಕರೆದುಕೊಂಡು ಹೋಗಬೇಕೆಂದು ನಿನ್ನಲ್ಲಿಗೆ ಬಂದಿದ್ದೆನಲ್ಲ.. ಅವತ್ತೇ
ಅಲ್ವಾ, ಮೊದಲ ಬಾರಿ ಮುತ್ತಿನ ವಿನಿಮಯವಾಗಿದ್ದು.. ನನಗಂತೂ ತಲೆಯೇ ತಿರುಗಿ
ಬಂದಿತ್ತು. ಅಬ್ಬಾ.. ಮುತ್ತಿನಲ್ಲೂ ಮತ್ತಿರುತ್ತೆ ಅಂತಾ ಬರೀ ಬಾಯಿಮಾತಿಗೆ
ಅಂದುಕೊಂಡಿದ್ದವನಿಗೆ ಅವತ್ತು ಸಾಕ್ಷಾತ್ಕಾರವಾಗಿತ್ತು. ನಾನು ನಿನ್ನ ಕಡೆ ನೋಡಿದಾಗ,
ನಿನ್ನ ಕೆನ್ನೆ ಕೆಂಪಾಗಿ ನೀನು ನಾಚಿಕೊಂಡೆಯಲ್ಲಾ.. ಇವತ್ತೂ ಅದು ನಂಗೆ ನೆನಪಿದೆ. ಆ
ಕ್ಷಣ ನಂಗೆ ತುಂಬಾನೇ ಇಷ್ಟ.. ಅವತ್ತು ರಾತ್ರಿ ಮುತ್ತಿನದೇ ಟಾಪಿಕ್.. ಎಲ್ಲ
ತರಹೇವಾರಿ ಮುತ್ತುಗಳ ಬಗ್ಗೆ ದೊಡ್ಡ ಚರ್ಚೆಯನ್ನೇ ಮಾಡಿದ್ವಿ. ಇಷ್ಟೇ ಸೀರಿಯಸ್ಸಾಗಿ,
ಇಷ್ಟೇ ಆಸಕ್ತಿಯಿಂದ ಇಬ್ಬರೂ ಕಾಲೇಜಿನ ಬುಕ್ಕು ಹಿಡ್ಕೊಂಡಿದ್ದಿದ್ರೆ, ಇಬ್ಬರೂ ನಂ.1
Rank ನ ಹಂಚ್ಕೊತಿದ್ವಿ ಅನ್ಸುತ್ತೆ.. ಅವತ್ತಿನ ರಾತ್ರಿ ನಾವು ಕಂಡು ಹಿಡಿದ ಕಾಫಿ
ಕಿಸ್ಸನ್ನು ನೀನು ಮರೆತಿಲ್ಲ ತಾನೇ?
ಅವತ್ತು ಬೆಳಿಗ್ಗೆ ನಿನ್ನ ಮನೆಗೆ ಬಂದಾಗ, ನೀನು ಕಾಫಿ ಮಾಡಿಕೊಟ್ಟೆ. ಎರಡು ಲೋಟ ಬೇಡ
ಅಂತಾ ಒಂದೇ ಲೋಟದಲ್ಲಿ ಕುಡಿತಿರ್ಬೇಕಾದ್ರೆ, ಕಾಫಿ ಕಿಸ್ಸು ನೆನಪಾಗಿ ನಿನ್ನಮುಂದೆ
ಹೇಳಿದಾಗ, ನೀನು ನಾಚಿಕೊಂಡು, ಅದೆಲ್ಲಾ ಏನೂ ಬೇಡ ಅಂದಿದ್ದೆ.. ನಾನು ನಿಂಗೆ ಚಿನ್ನ
ರನ್ನ ಬಂಗಾರ ಅಂತೆಲ್ಲಾ ಓಲೈಸಿ ಒಪ್ಪಿಸಿದ್ದೆ.. ಈ ಹುಡುಗಿಯರಿಗೆ ಬಂಗಾರ ಕೊಡಿಸದೇ
ಇದ್ರೂ ಪರವಾಗಿಲ್ಲ, ಚಿನ್ನ ರನ್ನ ಅಂತಾ ಮುದ್ದು ಮಾಡಿದ್ರೆ ಸಾಕು, ಒಲಿದು
ಬಿಡ್ತಾರೆ.. (conditions apply: ನಾನು ಹೇಳಿದ್ದು ಹುಡುಗಿಯರ ಬಗ್ಗೆ, ಹೆಂಡತಿಯರ
ಬಗ್ಗೆ ಅಲ್ಲ) ನಿನ್ನ ನಾಚಿಕೆಯ ಮೊಗವನ್ನು ನೋಡುತ್ತಾ ನಾ ನಿನ್ನ ತೊಡೆ ಮೇಲೆ ತಲೆ
ಇಟ್ಟಾಗ, ನೀನು ತಲೆಕೂದಲಲ್ಲಿ ಬೆರಳಾಡಿಸುತ್ತಾ ಅವತ್ತು ನಸು ನಕ್ಕೆಯಲ್ಲಾ.. ಅದ್ಯಾಕೆ
ಹಾಗೆ ನಕ್ಕೆ ಹುಡುಗಿ? ನೀ ಎರಡು ಸಿಪ್ ನಿನ್ನ ಇಷ್ಟದ ಬ್ರೂ ಕಾಫಿಯನ್ನು ಹೀರಿ,
ನಿನ್ನ ತೊಡೆಮೇಲೆ ತಲೆ ಇಟ್ಟು ನಿನ್ನ ತುಟಿಗಳಿಗಾಗಿ ಹಂಬಲಿಸುತ್ತಿದ್ದ ನನ್ನ
ತುಟಿಗಳಿಗೆ ತುಟಿ ಇಟ್ಟು ಕಾಫಿಯ ಗುಟುಕನ್ನು ಕೊಟ್ಯಲ್ಲಾ... ಅಬ್ಬಾ.. ಅವತ್ತೇ ನಾನು
ಸತ್ತು ಹೋದ್ರೂ ಚಿಂತೆಯಿರಲಿಲ್ಲ.. ಪ್ರಪಂಚದ ಎಲ್ಲ ಸುಖವೂ ನನ್ನೊಬ್ಬನಿಗೆ ಸಿಕ್ಕ
ಹಾಗೆ ಅನ್ನಿಸಿತ್ತು.. ಅದ್ಯಾವಾಗ ಕಾಫಿ ಮುಗಿದು ಹೋಯ್ತೋ ಗೊತ್ತಾಗ್ಲೇ ಇಲ್ಲ
ಅಲ್ವಾ???????????
ಇವತ್ತು ಅದೆಲ್ಲ ನೆನಪಾಗುತ್ತಿದೆ. ಇಷ್ಟು ದಿನವಿಲ್ಲದ್ದು ಇವತ್ಯಾಕೋ ಎಂದು ಕೇಳಬೇಡ.
ಇದನ್ನು ನಾನು ನಿನಗೆ ನೆನಪು ಮೂಡಿಸಿ ಸಾಧಿಸಬೇಕಾದ್ದು ಏನೂ ಇಲ್ಲ. ಸುಮ್ಮನೆ
ನೆನಪಾಯಿತು ಅಷ್ಟೇ. ಪ್ರಪಂಚದ ಪ್ರೇಮಿಗಳೆಲ್ಲಾ ತಮ್ಮ ತಮ್ಮ ಪ್ರೇಯಸಿಯ ಜೊತೆಗೆ ಎಷ್ಟು
ಚಂದವಿದ್ದಾರೆ. ಅದರಲ್ಲಿ ನಾನೊಬ್ಬನೇ ಬಡಪಾಯಿ ಪ್ರೇಯಸಿ ಇದ್ದರೂ ಇಲ್ಲದಂತಾಗಿರುವವನು.
ನೀನು ನನ್ನ ಬಿಟ್ಟು ನೀನು ದೂರ ಹೋಗಿ ನಾಲ್ಕೈದು ವರ್ಷವಾಯಿತು. ಇದುವರೆಗೂ ಒಂದು ಭೇಟಿ
ಇಲ್ಲ. ಮಾತಿಲ್ಲ-ಕಥೆಯಿಲ್ಲ. ಹುಡುಗಿಯರಿಗೆ ಸೊಕ್ಕು ಇರಬಹುದು, ಅಹಂ ಇರಬಾರದು
ಅಂತಾರೆ.. ಆದರೆ ನೀನು ಮಾಡ್ತಿರೋದೇನು? ಅರಿಯದೇ ವಿವೇಕವಿಲ್ಲದೇ ತಲೆಇಲ್ಲದೇ ಮಾಡಿದ
ತಪ್ಪಿಗೆ ಈಗಾಗಲೇ ನನಗೆ ಎರಡು ವರ್ಷ ನನ್ನನ್ನು ಅಲಕ್ಷಿಸಿ ವಿರಹ ವೇದನೆಯನ್ನು
ಕೊಟ್ಟುಬಿಟ್ಟೆ. ನಿನ್ನನ್ನು ಸಂಪೂರ್ಣವಾಗಿ ಕಳೆದುಕೊಂಡೆ ಎಂದುಕೊಂಡುಬಿಟ್ಟಿದ್ದೆ.
ನಿನ್ನ ಮಾತುಗಳು ಕೂಡಾ ನನಗೆ ಹಾಗೆ ಅನ್ನಿಸಿತ್ತು. ನಿನ್ನ ನಡವಳಿಕೆಗಳಲ್ಲಿ
ವ್ಯತ್ಯಾಸವಾಗಿದ್ದು ಕೂಡಾ ನನ್ನ ನಿನ್ನ ಒಂದಾಗುವಿಕೆಯ ಆಸೆಯನ್ನು
ಕಮರಿಸಿಬಿಟ್ಟಿತ್ತು. ನಾಲ್ಕು ವರ್ಷಗಳ ನಂತರ ಎಂದೋ ಒಂದು ದಿನ ನಾನು ನಿನ್ನಲ್ಲಿ
ಕ್ಷಮೆ ಕೇಳಿದ್ದೆ. ಇಷ್ಟು ದಿನ ಬೇಕಾಗಿತ್ತ ನಿನ್ನ ತಪ್ಪು ಅರ್ಥವಾಗಲು ಎಂದು ನೀನು
ಕೇಳಿದೆ. ಆದರೆ, ನಿನಗೆ ಗೊತ್ತಲ್ಲ, ನಾನು ಪೆದ್ದು ಅಂತಾ.. ನಿನ್ನಷ್ಟು ಜಾಣ್ಮೆ ನನಗೆ
ಇನ್ನೂ ಬಂದಿಲ್ಲ. ಒಂಥರಾ ಟ್ಯೂಬ್ ಲೈಟ್ ನಾನು.. ಮತ್ತೆ ನಿಮ್ಮ ನನ್ನ ಸಂಭಾಷಣೆಗಳು
ಮುಂದುವರೆದು ಮತ್ತೆ ನಿನ್ನನ್ನು ಪಡೆದುಕೊಳ್ಳುತ್ತೇನೆಂಬ ಆಸೆ ಮೂಡಿತು. ನಾಲ್ಕು
ವರ್ಷಗಳ ನಂತರ ಒಂದು ಬಾರಿ ಭೇಟಿಯಾಗಿದ್ದು ಕೂಡಾ ನನ್ನ ಆಸೆಯ ಮರುಜೀವಕ್ಕೆ
ಕಾರಣವಾಯಿತು. ಆದರೆ, ಮತ್ತೆ ಈಗ ಆಗಿದ್ದೇನು? ನನ್ನ ತಪ್ಪಲ್ಲದ ತಪ್ಪಿಗೆ ನೀನು ಎಂಥಾ
ಶಿಕ್ಷೆ ಕೊಟ್ಟಿದ್ದೀಯ.. ಛೆ.. ಯಾವ ಪ್ರೇಮಿಯೂ ಕೂಡಾ ಊಹಿಸಲಾರ. ಊಹಿಸಿಕೊಂಡರೂ
ಅದನ್ನು ಶಿಕ್ಷೆ ಎಂದು ಪರಿಗಣಿಸಲಾರ. ಹೇಳಲಾಗದಂಥಹ ಸಂಕಟವನ್ನು ಕೊಟ್ಟುಬಿಟ್ಟಿದ್ದೀಯ.
ಇದರಿಂದ ಈ ಬಾರಿ ನಿನ್ನ ಮೇಲೆ ಖಂಡಿತಾ ಕೋಪವಿದೆ. ನನ್ನ ತಪ್ಪಿಲ್ಲದ ತಪ್ಪಿಗೆ ನಾನು
ನಿನ್ನ ಕ್ಷಮೆ ಕೇಳಲಾರೆ. ನಾನು ದಡ್ಡನಿರಬಹುದು, ಆದರೆ ನನಗೂ ಒಂಚೂರು
ಆತ್ಮಾಭಿಮಾನವಿಲ್ಲವೇ? ನೀನಾಗಿ ನೀನು ನನ್ನ ಕ್ಷಮೆ ಕೇಳುವವರೆಗೆ ಕಾಯುತ್ತೇನೆ. ಈ
ಹುಚ್ಚಾಟದಲ್ಲಿ ನಿನ್ನ ಕಳೆದುಕೊಳ್ಳೋಕೂ ಕೂಡಾ ಸಿದ್ಧವಾಗಿದ್ದೇನೆ. ನೀನು ನನ್ನಲ್ಲಿ
ಮರಳಿ ಬಾರದಿದ್ದರೆ ಪರವಾಗಿಲ್ಲ. ಎಲ್ಲೇ ಇರು, ಹೇಗೇ ಇರು. ಸಂತೋಷವಾಗಿರು. ಮನೆಯಲ್ಲಿ
ತೋರಿಸಿದ ಹುಡುಗನನ್ನೇ ಮದುವೆಯಾಗಿಬಿಡು.
ನಿನಗಾಗಿ ಬರೆದ ಈ ಕವನವನ್ನು ಕೊನೆಯದಾಗಿ ಅರ್ಪಿಸಿಕೊಂಡುಬಿಡು..
ಕ್ಷಮಿಸದಿರು ಗೆಳತಿ ನೀ ಮಾಡಿದ ತಪ್ಪನು..
ನನ್ನ ಕಳೆದುಕೊಂಡ ಆ ನಿನ್ನ ತಪ್ಪನು..
ಮುಂಜಾವಿಗಾಗಿ ಕಾತರದಿ ಕಾದು
ಮೊದಲ ಗುಡ್ ಮಾರ್ನಿಂಗ್ ಹೇಳಿದ,
ಈ ಪೆದ್ದು ಹೃದಯವ ನೋಯಿಸಿದ ತಪ್ಪನು
ಕ್ಷಮಿಸದಿರು ಗೆಳತಿ ನೀ ಮಾಡಿದ ತಪ್ಪನು
ನನ್ನ ಕಳೆದುಕೊಂಡ ಆ ನಿನ್ನ ತಪ್ಪನು..
ನೀ ಏನೂ ತಿನ್ನದೇ ನಾ ಒಲ್ಲೆನೆಂದು
ಹಠವ ಮಾಡಿದ ಈ ನನ್ನ ಮನಸನು ನೋಯಿಸಿದ ತಪ್ಪನು
ಕ್ಷಮಿಸದಿರು ಗೆಳತಿ ನೀ ಮಾಡಿದ ತಪ್ಪನು
ನನ್ನ ಕಳೆದುಕೊಂಡ ಆ ನಿನ್ನ ತಪ್ಪನು..
ಸಾವಿರ ಕನಸುಗಳ ಕಟ್ಟಿ
ಜೊತೆ ಸೇರಿ ನೀರೆರೆದ ಈ ಮುದ್ದು ಪ್ರೀತಿಯ
ಕಾಡಿಸಿದ ತಪ್ಪನು
ಕ್ಷಮಿಸದಿರು ಗೆಳತಿ ನೀ ಮಾಡಿದ ತಪ್ಪನು
ನನ್ನ ಕಳೆದುಕೊಂಡ ಆ ನಿನ್ನ ತಪ್ಪನು.
ಕೊನೆಯದಾಗಿ ಒಂದು ಸಾಲು.. ನಿನ್ನ ಬಿಟ್ಟು ನಾನು ಬೇರೆ ಯಾರನ್ನೂ ಮದುವೆಯಾಗಲು
ಇಷ್ಟವಿಲ್ಲ. ಕೊನೆಯವರೆಗೂ ಹೀಗೆಯೇ ಇದ್ದುಬಿಡುವೆ..
ಇಂತಿ ನಿನ್ನ ಪ್ರೀತಿಯ
-ಯಳವತ್ತಿ. (ಕಾವ್ಯನಾಮ)
Web: shivagadag.blogspot.com
Email: shivagadag@gmail.com

31 July 2014

ಫೇಸ್ ಬುಕ್ಕು, ಬ್ಲಾಗಿಗರು, ಧರ್ಮಾಂಧತೆ ಮತ್ತು ಕಿತ್ತಾಟ..

ಫೇಸ್ ಬುಕ್ಕು, ಬ್ಲಾಗಿಗರು, ಧರ್ಮಾಂಧತೆ ಮತ್ತು ಕಿತ್ತಾಟ..

ನಾನು ಈ ಪೋಸ್ಟ್ ಬರೆಯುವ ಮುಂಚೆಯೇ ಹೇಳಿಬಿಡುತ್ತೇನೆ. ನಾನು ಕೋಮುವಾದಿಯೂ ಅಲ್ಲ, ಎಡ-ಬಲ ಪಂಥೀಯನೂ ಅಲ್ಲ. ನನ್ನ ಭಾರತ ದೇಶವನ್ನು ಸಾಯುವಷ್ಟು ಪ್ರೀತಿಸುವ ಹುಚ್ಚು ದೇಶಾಭಿಮಾನಿ..

ಛೇ..!! ಕಳೆದ ಹಲವು ದಿನಗಳಿಂದ ಫೇಸ್ ಬುಕ್ ನಲ್ಲಿ ನಡೆಯುತ್ತಿರುವ ಚರ್ಚೆ ನೋಡಿ ಅಸಹ್ಯವಾಗಿದೆ. Prakash Hegde (ಪ್ರಕಾಶಣ್ಣ) ಹೇಳಿದಂತೆ ಫೇಸ್ ಬುಕ್ ಬಳಕೆದಾರರಲ್ಲಿ ಮತ್ತು ವಿಶೇಷವಾಗಿ ಬ್ಲಾಗಿಗರಲ್ಲಿ ಎಡಪಂಥೀಯ, ಬಲಪಂಥೀಯ ಎಂಬ ಗುಂಪುಗಳಾಗಿ ಒಡೆದು ಹೋಗಿವೆ. ಇನ್ನೂ ಕೆಲವರು ತಟಸ್ಥವಾಗಿ ತಮಗೇ ಏನೂ ಗೊತ್ತಿಲ್ಲವೆಂಬಂತೆ ತಮ್ಮ ಪಾಡಿಗೆ ತಾವು ಇದ್ದುಬಿಟ್ಟಿದ್ದಾರೆ.

ಇಷ್ಟಕ್ಕೂ ಇದು ಶುರುವಾದದ್ದು ಲೋಕಸಭಾ ಚುನಾವಣೆಗಳ ಪೂರ್ವದಿಂದಲೇ ಎಂದು ಹೇಳಬಹುದು. ಅದಕ್ಕೂ ಮುಂಚೆ ಸಣ್ಣದಾಗಿ ಇದ್ದರೂ ಭುಗಿಲೆದ್ದಿದ್ದು ಚುನಾವಣೆಯಲ್ಲಿ ನರೇಂದ್ರ ಮೋದಿಯನ್ನು ಬೆಂಬಲಿಸಬೇಕೋ ಬೇಡವೋ ಎಂಬ ಪ್ರಶ್ನೆಯ ಮೂಲಕ. ಹಲವು ಯುವ ಜನಾಂಗದವರು ಶ್ರೀ ನರೇಂದ್ರಮೋದಿಯವರ ಮಾತುಗಳಿಗೆ, ಆತನ ದೂರ ದೃಷ್ಟಿ ಮತ್ತು ಅಭಿವೃದ್ಧಿ ಕಾರ್ಯಗಳಿಗೆ ಮನಸೋತು ಆತನ ಅಭಿಮಾನಿಯಾಗಿದ್ದುದರಲ್ಲಿ ಆಶ್ಚರ್ಯವಿಲ್ಲ. ಇಡೀ ದೇಶದ ಮಾಧ್ಯಮಗಳೇ ಆತನ ವಿರುದ್ಧ ನಿಂತರೂ ಆತನ ಮೇಲೆ ಕಲ್ಲುಗಳನ್ನು ಎಸೆದರೂ ಅದನ್ನೇ ಬಂಡವಾಳ ಮಾಡಿಕೊಂಡು ಮೆಟ್ಟಿಗಳಾಗಿ ಪರಿವರ್ತಿಸಿ ವಿಜಯದ ನಗೆ ಬೀರಿದವರು ಶ್ರೀ ನರೇಂದ್ರ ಮೋದಿಯವರು. ಅವರ ವಾಕ್ ಚಾತುರ್ಯಕ್ಕೆ, ದೃಢ ಹೆಜ್ಜೆಗೆ, ಗುರಿ ತಲುಪಿದ ರೀತಿಗೆ ಶತ್ರುವಾದರೂ ಕೂಡಾ ತಲೆದೂಗಿಯಾನು.  

ಆದರೆ, ಇಲ್ಲಿ ನಡೆದಿದ್ದೇ ಬೇರೆ. ನರೇಂದ್ರಮೋದಿಯವರನ್ನು ವೈಭವೀಕರಿಸುವಂತಹ ವೇಳೆಯಲ್ಲಿ ಧರ್ಮವು ಕೂಡಾ ನುಸುಳಿದ್ದು ಖಂಡನೀಯ. ನಮ್ಮ ದೇಶ ಜಾತ್ಯಾತೀತ ದೇಶ. ಇಲ್ಲಿ ಹಲವಾರು ಧರ್ಮಗಳಿವೆ. ಈಗಿನ ಸಂದರ್ಭದಲ್ಲಿ ಹಿಂದೂ ಧರ್ಮವನ್ನು ಹೀಗಳೆಯುವುದು ಸರಳ ಬಿಟ್ಟಿ ಪ್ರಚಾರವನ್ನು ತಂದುಕೊಡುವ ಸುಲಭ ಮಾರ್ಗವಾಗಿದೆ. ಇನ್ನು ಸ್ವಘೋಷಿತ ಬುದ್ಧಿಜೀವಿಗಳು ದಿನ ಬೆಳಗಾದರೆ ಇದನ್ನೇ ತಮ್ಮ ಕಾಯಕವನ್ನು ಮಾಡಿಕೊಂಡಿದ್ದಾರೆ. ಟಿ.ವಿ. ಯಲ್ಲಿ ಇದನ್ನೆಲ್ಲಾ ನೋಡಿ ತೀರಾ ಅಸಹ್ಯವಾಗಿದೆ. ಯಾರೋ ಒಬ್ಬರು ದೇವರ ಮೂರ್ತಿ ಮೇಲೆ ಉಚ್ಚೆ ಉಯ್ದರಂತೆ, ಇನ್ನಾರೋ ರಾಮಾಯಣ ಮಹಾಭಾರತದ ಕಥೆಗಳು ಅತ್ಯಾಚಾರಕ್ಕೆ ಪ್ರೇರಣೆಯಂತೆ ಎನ್ನುವಂಥಹ ಬಾಲಿಶ ಹೇಳಿಕೆಗಳನ್ನು ಕೊಡುತ್ತಾ ತಾವು ಜೀವಂತವಾಗಿದ್ದೇವೆ ಎಂದು ಸಾರುತ್ತಿದ್ದಾರೆ. ಇನ್ನು ಇತರೆ ಧರ್ಮಕ್ಕೆ ಬಂದರೆ, ಅವರಿಗೆ ಅಷ್ಟೊಂದು ಜನ ಹೆಂಡಿರು ಮಾಡಿಕೊಳ್ಳಬಹುದಂತೆ, ಮುಖ-ಮೈ ಕಾಣದ ಹಾಗೆ ಬಟ್ಟೆ ಹಾಕಿಕೊಳ್ಳಬೇಕಂತೆ, ಆ ಧರ್ಮದಲ್ಲಿ ಗುಲಾಮರನ್ನು ಹೇಗೆ ಬೇಕಾದರೂ ಬಳಸಿಕೊಳ್ಳಬಹುದಂತೆ... ಇತ್ಯಾದಿಗಳ ಚರ್ಚೆಗಳೇ ಇತ್ತೀಚಿನ ದಿನಗಳಲ್ಲಿ ದೊಡ್ಡ ವಿಷಯವಾಗಿದೆ.

 ನಿಜಕ್ಕೂ ಈ ತಲೆಮಾರಿನಲ್ಲಿ ಅತ್ಯಂತ ಅಪಾಯದಲ್ಲಿರುವುದು ಹಿಂದೂ ಧರ್ಮ. ನಮ್ಮ ಭಾರತ ದೇಶವನ್ನು ಹಿಂದೂಸ್ತಾನ ಎಂದು ಕರೆಯುವುದು ಯಾವುದೋ ಪ್ರಧಾನಿಯಿಂದಲೇ ನಿಂತುಹೋಗಿದೆ. ಹಿಂದೂಗಳು ಸರ್ವ ಧರ್ಮ ಸಹಿಷ್ಣರು. ಪ್ರಪಂಚದ ಎಲ್ಲಾ ಧರ್ಮಗಳು ಜನರನ್ನು ತಮ್ಮ ಧರ್ಮಕ್ಕೆ  ಸೇರಿಸಿಕೊಳ್ಳಲು ಆಸೆ ಆಮಿಷಗಳನ್ನು ತೋರಿಸುತ್ತಿದ್ದರೆ, ಈ ಹಿಂದೂ ಧರ್ಮವೊಂದೇ ಎಂದೂ ತನ್ನ ಧರ್ಮದ ಪ್ರಚಾರ ಮಾಡಿ ಯಾರನ್ನೂ ಓಲೈಸಲಿಲ್ಲ. ಮುಸ್ಲಿಂಮರು, ಆಂಗ್ಲರು, ಡಚ್ಚರು ಇತ್ಯಾದಿಗಳು ನಮ್ಮ ಮೇಲೆ ಒಮ್ಮೆಲೆ ಯುದ್ಧಕ್ಕೆ ಬಂದವರಲ್ಲ.  ಆಶ್ರಯ ಕೇಳಿಕೊಂಡು ಬಂದವರು. ನಂತರ ತಾವೇ ನಮ್ಮ ಮೇಲೆ ಬಿದ್ದು ದೇಶವನ್ನು ವಶಪಡಿಸಿಕೊಂಡವರು. ಇದು ಪ್ರಪಂಚಕ್ಕೇ ಗೊತ್ತಿರುವ ವಿಷಯ. ಸ್ವಾತಂತ್ರ್ಯಾ ನಂತರ ಪಾಕಿಸ್ತಾನ ಸೇರಿಸಿಕೊಳ್ಳದ ಮುಸ್ಲಿಂರನ್ನು, ಟಿಬೆಟಿಗರನ್ನು, ಯಹೂದಿಗಳನ್ನು ಪ್ಯಾಲಸ್ತೇನಿಯರನ್ನು ಕರೆದು, ಅಪ್ಪಿ ಮುದ್ದಾಡಿ, ತನ್ನವರೆಂದು ಜಗತ್ತಿಗೆ ಸಾರಿದ್ದು ಈ ನನ್ನ ಭಾರತಾಂಬೆ ಮತ್ತು ಈ ನನ್ನ ಭಾರತಾಂಬೆಯ ಹಿಂದೂ ಮಕ್ಕಳು. ಇದು ನಡೆದು ಸಾಕಷ್ಟು ದಶಕಗಳು ಕಳೆದಿವೆ. ಇತರೆ ಧರ್ಮದವರನ್ನು ನಾವು ನಮ್ಮ ಅಣ್ಣ ತಮ್ಮಂದಿರೆಂದೇ ಒಪ್ಪಿಕೊಂಡುಬಿಟ್ಟಿದ್ದೇವೆ. ಅವರು ನಮ್ಮ ಗಣೇಶನನ್ನು ಕೂರಿಸಿ ಪೂಜೆ ಮಾಡಿದರೆ, ನಾವು ಪ್ರತಿ ವರ್ಷ ಅವರ ರಂಜಾನ್ ಉಪವಾಸವನ್ನು  ಕೈಗೊಳ್ಳುತ್ತೇವೆ. ನಿಮಗ್ಯಾರಿಗಾದರೂ ಸಂಶಯವಿದ್ದರೆ, ರೋಣಕ್ಕೆ ಬಂದು ನೋಡಿ. ಜಾತಿ-ಧರ್ಮದ ವಿಷಯಗಳು ಈಗ ಹಳತಾಗಿವೆ. ಚಲಾವಣೆಯಿಲ್ಲದ ನಾಣ್ಯ. ಒಂದು ಹಂತದಲ್ಲಿ ಎಲ್ಲವೂ ಸರಿಯಾಗಿತ್ತು.

ಆದರೆ, ಧರ್ಮಾಂಧತೆ ಬಿಡಬೇಕಲ್ಲ.. ಯಾವುದೋ ದೇಶದಲ್ಲಿನ ತನ್ನ ಧರ್ಮದವರನ್ನು ತನ್ನವರೆಂದು ಒಪ್ಪಿಕೊಳ್ಳಲಿ. ಆದರೆ, ಅದರ ಸಲುವಾಗಿ ನಮ್ಮ ದೇಶದವರ ಅಣ್ಣ ತಮ್ಮಂದಿರ ಮೇಲೆ ದಾಳಿ ನಡೆಸುವುದು ಯಾವ ನ್ಯಾಯ? ಬೇರೇ ದೇಶದವರು ನಮ್ಮಲ್ಲಿ ಬಂದು ಕೊಂದಾಗ, ಆತನು ಅಲ್ಪ ಸಂಖ್ಯಾತನೆಂದು, ವಾದಿಸಿ, ಅವನನ್ನು ಬಿಡುಗಡೆಗೊಳಿಸಬೇಕೆಂದು ವಾದಿಸುವುದು ಯಾವ ನ್ಯಾಯ? ಆತನನ್ನು ರಕ್ಷಿಸುವುದು ಯಾವ ನ್ಯಾಯ??? ಯಾವ ದೇಶ ಪ್ರೇಮಿ ತಾನೆ ಇದನ್ನು ಸಹಿಸಿಯಾನು? ಅಲ್ಪಸಂಖ್ಯಾತ ಮುಖಂಡರ, ಬುದ್ಧಿಜೀವಿಗಳೆನಿಸಿಕೊಂಡವರ ಇಂತಹ ಮಾತುಗಳು ನಿರ್ಧಿಷ್ಟ ಧರ್ಮದವರ ಮೇಲೆ ಅನುಮಾನ ಮೂಡಿಸುವುದಿಲ್ಲವೇ? ಇಲ್ಲಿನ ಧರ್ಮ ಬಾಂಧವರ ಸಹಕಾರ ಇಲ್ಲದೇ ಬೇರೇ ದೇಶದವರು ಇಲ್ಲಿ ಬಂದು ದಾಳಿ ಮಾಡಲು ಸಾಧ್ಯವೇ?

ನನ್ನ ಪ್ರೀತಿಯ ದೇಶದ ಮುಸ್ಲಿಂ ಅಣ್ಣ ತಮ್ಮಂದಿರೇ.. ಎಲ್ಲಿ ಹೋಯಿತು ನಿಮ್ಮ ದೇಶಭಕ್ತಿ??? ಎಂದು ಚೀರಿ ಕೇಳೋಣ ಎಂದೆನಿಸುತ್ತದೆ. ಆದರೆ, ಎಲ್ಲಾ ನನ್ನ ಮುಸ್ಲಿಂ ಅಣ್ಣ ತಮ್ಮಂದಿರು ಈ ರೀತಿಯಲ್ಲ. ಎಲ್ಲೋ ಕೆಲವು ಧರ್ಮಾಂಧರು ಎಂದು ಮನಸ್ಸನ್ನು ಸಮಾಧಾನಗೊಳಿಸಿಕೊಳ್ಳುತ್ತೇನೆ. ಎಷ್ಟೊಂದು ಜನ ಮುಸ್ಲಿಂ ಬಾಂದವರು ಸೇನೆಯಲ್ಲಿಲ್ಲವೇ? ಭಾರತಾಂಬೆಯನ್ನೇ ಉಸಿರೆಂದು ಭಾವಿಸಿಲ್ಲವೇ? ಕೆಲವರಿಂದ ಇಂತಹ ದೇಶಭಕ್ತರಿಗೂ ಕೂಡಾ ಕೆಟ್ಟ ಹೆಸರು. ನನ್ನ ಸ್ನೇಹಿತರಲ್ಲೂ ಮುಸ್ಲಿಮರಿದ್ದಾರೆ. ಅವರ ಧರ್ಮವನ್ನು ನಾನು ಗೌರವಿಸುತ್ತೇನೆ. ಅವರೂ ಕೂಡಾ ನಮ್ಮ ಧರ್ಮವನ್ನು ಗೌರವಿಸುತ್ತಾರೆ. ಅವರಲ್ಲಿ ಕೂಡಾ ಅಪ್ಪಟ ಭಾರತೀಯರಿದ್ದಾರೆ. ಅವರ ಜೊತೆ ಕುಳಿತಾಗ ಧರ್ಮಕ್ಕೂ ಧರ್ಮಾಂಧತೆಯ ಬಗೆಗೂ ವ್ಯತ್ಯಾಸವನ್ನು ತಿಳಿಸಲು ಕೂಡಾ ಪ್ರಯತ್ನಿಸಿದ್ದೇನೆ.

ನರೇಂದ್ರ ಮೋದಿಯ ಪರ ಪ್ರಚಾರ ಮಾಡುವಾಗ ಕೆಲವು ಫೇಸ್ ಬುಕ್ಕಿಗರು ಹಿಂದೂ ಧರ್ಮವನ್ನು ರಕ್ಷಿಸಲು ಬಂದ ಮಹಾತ್ಮ ಎಂಬಂತೆ ಚಿತ್ರಿಸಿದರು. ಒಂದು ರೀತಿಯಲ್ಲಿ ಇದು ತಪ್ಪು ಕಾಣಲಿಲ್ಲ. ಹಿಂದೂ ಧರ್ಮವೆಂದರೆ,  ಅದೊಂದು ಜೀವನ ಕಲೆ. ಸರ್ವ ಧರ್ಮ ಸಹಿಷ್ಣುತೆಯನ್ನು ಈ ಜೀವನ ಪದ್ಧತಿ ಕಲಿಸಿಕೊಡುತ್ತದೆ. ಗುಜರಾತಿನಲ್ಲಿ ಆತ ಮಾಡಿದ್ದು ಅದನ್ನೇ. ಅಪ್ಪಟ ಹಿಂದೂವಾಗಿ ನಡೆದುಕೊಂಡ. ಎಲ್ಲರನ್ನೂ ತಮ್ಮ ಅಣ್ಣ ತಮ್ಮಂದಿರಂತೆ ನೋಡಿಕೊಂಡಿದ್ದಕ್ಕೇ ಅಭೂತಪೂರ್ವವಾಗಿ ಚುನಾವಣೆಯಲ್ಲಿ ಜಯಗಳಿಸಿದ್ದು ಎಂಬುದನ್ನು ಒಪ್ಪಿಕೊಳ್ಳಬೇಕಾದ ಪರಿಸ್ಥಿತಿ ಇದೆ. ಹಿಂದೂ ಧರ್ಮದಲ್ಲಿ ಹುಳುಕುಗಳಿಲ್ಲ. ಇನ್ನು ಕೆಲವರು ವಾದಿಸುವ ಮೂಢನಂಬಿಕೆಗಳೆಂಬ ಆಚರಣೆಗಳು ಧರ್ಮದಲ್ಲಿ ಪ್ರಸ್ತಾಪವಾಗೇ ಇಲ್ಲ. ಅದು ಮಾನವ ಸಮಾಜ ತಮ್ಮಿಂದ ತಾವೇ ರೂಢಿಸಿಕೊಂಡಿ ಬಂದಂತವುಗಳು. ಅದರಲ್ಲಿ ಎಲ್ಲವೂ ತಪ್ಪೆಂದಲ್ಲ. ಸರಿಯಾಗಿದ್ದಿದ್ದನ್ನು ಸ್ವೀಕರಿಸಿ, ತಪ್ಪಿದ್ದಂತವುಗಳನ್ನು ತಿದ್ದಿದರಾಯಿತು. ಆದರೆ, ಈ ಬು.ಜೀ. ಗಳಿಗೆ  ಅದೆಲ್ಲ ಬೇಕಿಲ್ಲ. ಒಂದು ಧರ್ಮದವನ ನಂಬಿಕೆಯನ್ನು ಒಡೆದು ಚೂರು ಚೂರು ಮಾಡಲೇಬೇಕೆಂಬ ಹಠ ತೊಟ್ಟು ನಿಂತಂತಿದೆ. ದೇವರೆನ್ನುವುದು ಒಂದು ನಂಬಿಕೆ. ನಂಬಿಕೆಯ ಆಧಾರದ ಮೇಲೆಯೇ ಪ್ರಪಂಚ ನಿಂತಿರುವುದು. ಒಬ್ಬ ದೇವರ ಮೂರ್ತಿ ಮೇಲೆ ಉಚ್ಛೆ ಹೊಯ್ದರೆ ಅದು ಮೂರ್ತಿಯ ಮೇಲೆ ಮೂತ್ರ ಮಾಡಿದ ಹಾಗಲ್ಲ. ಮಾನವನ ನಂಬಿಕೆಯನ್ನೇ ಪ್ರಶ್ನಿಸುವಂಥದ್ದು.  ಛೆ.. ಎಂತಹ ಅಸಹ್ಯಕರ ಬೆಳವಣಿಗೆಗಳು ಬೆಳೆದುಬಿಟ್ಟವು?? ಇದನ್ನೆಲ್ಲಾ ಎಲ್ಲ ಹಿಂದೂಗಳೂ ಪ್ರತಿಭಟಿಸಲಿಲ್ಲ. ಯಾಕೆ ಹೇಳಿ? ಅವರು ಭಾರತೀಯರಾಗಿದ್ದರು. ಈ ಮಣ್ಣು ಅವರಿಗೆ ಎಂದೂ ಹಿಂಸೆಯನ್ನು ಕಲಿಸಿಲ್ಲ. ಅವರೆಂದಿಗೂ ಧರ್ಮಾಂಧತೆಯನ್ನು ಹೊಂದಿಲ್ಲ. ಕೆಲವರು ಅವರ ವಿರೋಧವಾಗಿ ಮಾತನಾಡಿದರು. ಆದರೆ ಅಂಥವರನ್ನು ಕಾನೂನು ರೀತಿ ಶಿಕ್ಷಿಸಲು ಅಥವಾ ತಮ್ಮದೇ ರೀತಿಯಲ್ಲಿ ಪ್ರತಿಭಟಿಸಿದರೇ ವಿನಃ ಬೇರೇ ದಾರಿ ಹಿಡಿಯಲಿಲ್ಲ. ಅದೇ ಬೇರೇ ದೇಶದಲ್ಲಿ ಅಲ್ಲಿನ ಧರ್ಮದ ಬಗ್ಗೆ ಮಾತನಾಡಿದರೆ, ಆ ಧರ್ಮದವರು ಬಿಟ್ಟಾರೆಯೇ? ರುಂಡಮುಂಡವನ್ನು ಬೇರೆ ಮಾಡಿಬಿಟ್ಟಾರು. ನಮ್ಮ ದೇಶದ ಬೇರೇ ಧರ್ಮದವರು ಕೂಡಾ ಈ ರೀತಿಯಾಗಿ ಹಿಂಸಿಸಲು ಹೋಗುವುದಿಲ್ಲ. ಯಾಕೆಂದರೆ, ಅವರು ಕೂಡಾ ಭಾರತಾಂಬೆಯ ಮಕ್ಕಳು. ಈ ಮಣ್ಣಿನಲ್ಲಿ ಧರ್ಮಸಹಿಷ್ಣುತೆ ಕೂಡಾ ಅವರಿಗೆ ಬಳುವಳಿಯಾಗಿ ಬಂದುಬಿಟ್ಟಿದೆ. ಆದರೆ, ಹೊರಗಿನಿಂದ ಬರುವಂತಹ ಪ್ರಚೋದನೆಯಿದೆಯಲ್ಲಾ ಅದು ತೀರಾ ಹಾನಿಕಾರಕ. ನನ್ನ ಮುಸ್ಲಿಂ ಅಣ್ಣ ತಮ್ಮಂದಿರು ಈ ಪ್ರಚೋದನೆಗೆ ಒಳಗಾಗದಿರಲೆಂದು ಸದಾ ಆಶಿಸುತ್ತೇನೆ.

ಇನ್ನು ಫೇಸ್ ಬುಕ್ಕಿನಲ್ಲಿನ ಇತ್ತೀಚಿನ ವಿ.ಆರ್. ಭಟ್ ರವರ ಪ್ರಕರಣವನ್ನು ನೋಡಿದರೆ, ಪ್ರತಿಭಾ ರವರದ್ದು ಮತ್ತು ಭಟ್ಟರದ್ದು ಇಬ್ಬರದ್ದೂ ಸಮಾನವಾದ ತಪ್ಪು ಇದೆ. ಪ್ರತಿಭಾ ರವರು ಭಟ್ಟರನ್ನು ಪ್ರಚೋದಿಸಿರುವುದನ್ನು ಸೂಕ್ಷ್ಮವಾಗಿ ಗಮನಿಸಿದರೆ ಗೊತ್ತಾಗುತ್ತದೆ. ಇನ್ನು ಇವತ್ತಿನ ಸುದ್ಧಿಯಂತೆ ಭಟ್ಟರ ಬಂಧನವಾಗದಿದ್ದರೆ ರಾಜ್ಯಾದ್ಯಂತ ಪ್ರತಿಭಟನೆ ಕೂಡಾ ಇದೆಯಂತೆ. ಅಯ್ಯೋ ನನ್ನ ದೇಶವೇ.. ಅಮಾಯಕ ಮುಗ್ಧ ಹೆಣ್ಣುಮಕ್ಕಳ, ಹಸುಗೂಸುಗಳ ಅತ್ಯಾಚಾರ ಮಾಡಿದವರನ್ನು ಹಿಡಿಯುವುದನ್ನು ಬಿಟ್ಟು, ಇನ್ನು ಮುಂದೆ ಯಾವುದೇ ಹೆಣ್ಣು ಮಗಳ ಮೇಲೆ ಅತ್ಯಾಚಾರವಾಗದಂತೆ ತಡೆಯುವುದನ್ನು ಬಿಟ್ಟು ಪೋಲೀಸ್ ಇಲಾಖೆ ಭಟ್ಟ ಎಂಬ ಬ್ಲಾಗಿಗನೊಬ್ಬನ ಹಿಂದೆ ಬೀಳಬೇಕಂತೆ. ಏನಾಗಿದೆ ನಮ್ಮವರಿಗೆ??? ಭಟ್ಟರ ಪ್ರಕರಣ ತೀರಾ ವೈಯುಕ್ತಿಕವಾದದ್ದು. ಇದು ಧರ್ಮದ ವಿಚಾರವಾಗಿ ಮಾರ್ಪಾಡಾಗಿದೆ. ಪ್ರತಿಭಾ ರವರು ಕೂಡಾ ಒಂದೇ ಧರ್ಮದವರಾದರೂ ಕೂಡಾ ಧರ್ಮದ ವಿಷಯ ಇಲ್ಲಿ ಮುಖ್ಯವಾಗಿದೆ. ಇದಕ್ಕೆ ರಾಜಕೀಯ ಪಕ್ಷದ ಮತ್ತು ಬು.ಜೀ. ಗಳ ಬೆಂಬಲ ಬೇರೆ. ಈ ಭೂಮಿಯೇ ಬಾಯಿ ತೆರೆದು ನುಂಗಬಾರದೇ ಎನಿಸುವಷ್ಟು ಅಸಹನೆ ಉಂಟಾಗುತ್ತಿದೆ. ಛೀ.. ಈ ಪ್ರಕರಣಕ್ಕೆ ಎಳ್ಳು ನೀರು ಬಿಡೋಣ. ಅವರು ಕಾನೂನು ಪ್ರಕಾರವಾಗಿ ಕಿತ್ತಾಡಿಕೊಳ್ಳಲಿ  ಬಿಡಿ. ತಪ್ಪಿದ್ದವರಿಗೆ ಶಿಕ್ಷಯಾಗಲಿ.


ಎಲ್ಲರಲ್ಲೂ ಒಂದು ವಿನಂತಿ...

ಸ್ನೇಹಿತರೇ ಮೊದಲು ನಮ್ಮ ಧರ್ಮಾಂಧತೆಯನ್ನು ಹೋಗಲಾಡಿಸೋಣ. ನಮ್ಮ ಧರ್ಮದ ಬಗೆಗಿನ ನಮ್ಮ ಅಭಿಮಾನ ನಮ್ಮಲ್ಲೆ ಇರಲಿ. ಸಮಾಜದಲ್ಲಿ ಎಲ್ಲ ಧರ್ಮದವರೂ ಒಂದೇ. ಮೊದಲು ನಾವು ಭಾರತೀಯರಾಗೋಣ. ಎಲ್ಲಾ ಧರ್ಮವನ್ನು ಗೌರವಿಸೋಣ. ನಾನು ಮೊದಲು ಹಿಂದೂ ಅಥವಾ ಮುಸ್ಲಿಂ ನಂತರ ಭಾರತೀಯ ಎನ್ನುವ ತಪ್ಪು ಕಲ್ಪನೆಯನ್ನು ಹೋಗಲಾಡಿಸಿಕೊಳ್ಳಿ. ನಾವು ಮೊದಲು ಭಾರತೀಯರೆಂದು ಎಲ್ಲರೂ ಒಪ್ಪಿಕೊಳ್ಳೋಣ. ಇನ್ನು ಮಾನವ ಹಕ್ಕುಗಳಿಗೆ ಬಂದರೆ, ನಮ್ಮಲ್ಲಿನ ಮಹಿಳೆಯರ ಶೋಷಣೆ ಬಗ್ಗೆ (ಎಲ್ಲಾ ಧರ್ಮದಲ್ಲಿ ಇದೆ) ಚರ್ಚೆ ಮಾಡಿ ಅದನ್ನು ಹೋಗಲಾಡಿಸೋಣ. ಮೊದಲು ಎಲ್ಲರೂ ಶಿಕ್ಷಣ ಪಡೆಯುವಂತಾಗಲಿ. ನೈತಿಕತೆಯನ್ನು ಕಲಿಸೋಣ ಇದರಿಂದ ಅತ್ಯಾಚಾರಗಳು ಕಡಿಮೆಯಾದಾವು. ನಾವು ನಮ್ಮಲ್ಲಿನ ಆರ್ಥಿಕ ದುರ್ಬಲತೆಯ ವಿರುದ್ಧ ಹೋರಾಡೋಣ. ನಮ್ಮ ದೇಶದ ಬಗ್ಗೆ ಯೋಚಿಸೋಣ. ಎಲ್ಲ ಧರ್ಮದವರು ಅಣ್ಣ ತಮ್ಮಂದಿರಂತೆ ಬಾಳೋಣ. ಅದು ಬಿಟ್ಟು ಧರ್ಮದ ವಿಷಯವನ್ನೇ ಪ್ರಚಾರಕ್ಕೆ ಬಳಸಿಕೊಳ್ಳುವವರನ್ನು ವೈಭವೀಕರಿಸುವುದರ ಬದಲಾಗಿ ಕಾಲು ಕಸದಂತೆ ತಿರಸ್ಕರಿಸೋಣ.


ಕೊನೆಯ ಸಾಲುಗಳು..

ಸ್ನೇಹಿತರೇ, ಕಿತ್ತಾಟವನ್ನು ಇಲ್ಲಿಗೇ ನಿಲ್ಲಿಸಿ. ನೀವು ಬುದ್ಧಿ ಜೀವಿಗಳಂತೆ ನಟನೆ  ಮಾಡಬೇಡಿ. ಎಲ್ಲರಿಗೂ ಸಮಾನವಾಗಿ ಗೌರವ ನೀಡೋಣ. ಬ್ಲಾಗಿಗರೆಲ್ಲರೂ ಒಂದೇ ಎಂಬ  ಮಂತ್ರ ಪಠಿಸೋಣ.


-ಯಳವತ್ತಿ.

14 April 2014

ಲೋಕಾಯುಕ್ತ ದಾಳಿಯ ನಂತರ ಮುಂದೇನು???

ಇವತ್ತು ಫೇಸ್ ಬುಕ್ ನ್ನು ಮೊಬೈಲ್ ನಲ್ಲಿ ನೋಡುತ್ತಿರಬೇಕಾದರೆ, ನಮ್ಮ ಉಮೇಶ ದೇಸಾಯಿ ಸರ್ ರವರು ಈ ಕೆಳಕಂಡ ಪೋಸ್ಟ್ ನ್ನು ಅಂಟಿಸಿದ್ದರು ಮತ್ತು ಪ್ರಶ್ನೆಗಳನ್ನು ಕೇಳಿದ್ದರು..
ಸಾಮಾನ್ಯವಾದ ಸುದ್ದಿ ಅಂದರೆ ರಾಜ್ಯದಲ್ಲಿ ಲೋಕಾಯುಕ್ತ ದಾಳಿ ಆಗುತ್ತದೆ
ದಾಳಿಯಾದವರ ಮನೆಯಲ್ಲಿ ಇಷ್ಟು ಬಂಗಾರ, ಹಣ ಇತ್ಯಾದಿ ಸಿಕ್ಕವು ಹಾಗೆಯೇ ಅವರ ಲಾಕರ್ ಇತ್ಯಾದಿ
ಜಪ್ತಿ ಮಾಡತಾರೆ..ನನ್ನ ಪ್ರಶ್ನೆ ಮುಂದೇನು..
೧) ದಾಳಿಗೊಳಗಾದ ವ್ಯಕ್ತಿಯನ್ನು ಕಾಯಂ ಆಗಿ ನೌಕರಿಯಿಂದ ಕಿತ್ತೊಗೆಯುತ್ತಾರೆಯೇ..?
೨) ಅವ ಕೋರ್ಟ್ ಮೊರೆಹೋಗಬಹುದೇ..?
೩) ವಿಚಾರಣೆ ಮುಗಿಯುವವರೆಗೆ ಅವನನ್ನು ಸಸ್ಪೆಂಡ್ ಮಾದುತ್ತಾರೆಯೇ ಹೇಗೆ..?
ನನಗೆ ತಿಳಿಯುವ ಕುತೂಹಲ ಇದೆ ನಾ ಬರೆಯುತ್ತಿರುವ ಕತೆಗೆ ನಿಮ್ಮಗಳ ಉತ್ತರದಿಂದ ಸಹಾಯವಾಗುವುದು ಸೊ ಪ್ಲೀಸ್ ಹೇಳಿ...
ಈ ಪ್ರಶ್ನೆಗಳಿಗೆ ಉತ್ತರವಾಗಿ ನನ್ನ ಉತ್ತರವನ್ನು ಸಹ ತಿಳಿಸಿದ್ದೆ. ಆದರೆ, ಅದು ಸಾಕಾಯಿತು ಅನ್ನಿಸುತ್ತಿಲ್ಲ. ನನಗೆ ತಿಳಿದಷ್ಟು ಮಟ್ಟಿಗೆ ಸ್ವಲ್ಪ ವಿವರಣೆಯನ್ನು ನೀಡುತ್ತಿದ್ದೇನೆ.
ಲೋಕಾಯುಕ್ತದವರು ಯಾವುದೇ ಅಧಿಕಾರಿ/ನೌಕರನ ಮನೆಯನ್ನು ದಾಳಿ ಮಾಡಿದಾಗ, ಅಂದಿನ ಎಲ್ಲಾ ಟೀವಿ ಚಾನಲ್‍ ಗಳಲ್ಲಿ ಹಾಗೂ ಮಾರನೇ ದಿನದ ಪತ್ರಿಕೆಗಳಲ್ಲಿ ಕೇವಲ ಇದರದ್ದೇ ಮುಖ್ಯ ಸುದ್ದಿ. ದಾಳಿಗೊಳಗಾದ ಅಧಿಕಾರಿ/ನೌಕರನನ್ನು ಬಲೆಗೆ ಇದ್ದ ತಿಮಿಂಗಿಲ.. ಇತ್ಯಾದಿ ಸರ್ವನಾಮಗಳೊಂದಿಗೆ ಸಂಬೋಧಿಸುವುದು ಕುಚೇಷ್ಠೆಯ ಪರಿಪಾಠವಾಗಿದೆ. ಕೆಲವರು ಭ್ರಷ್ಠರು ಇರಬಹುದು. ಆದರೆ, ಎಲ್ಲರೂ ಭ್ರಷ್ಠರೆಂದೇ ನಾನು ಹೇಳುತ್ತಿಲ್ಲ. ಕೆಲವೊಂದು ಅಧಿಕಾರಿಗಳ ಮನೆ ಮೇಲೆ ಜರುಗಿದ ದಾಳಿಯ ನಂತರ ನ್ಯಾಯಾಲಯದ ಕಟಕಟೆಯಲ್ಲಿ ಅವರನ್ನು ಲೋಕಾಯುಕ್ತರು ತಂದು ನಿಲ್ಲಿಸುವುದು ಅಷ್ಟು ಸುಲಭವಲ್ಲ. ಅದು ಯಾಕೆಂದು ನಿಮಗೆ ಹೇಳುತ್ತೇನೆ..
ಪ್ರತಿಯೊಬ್ಬ ಸರಕಾರಿ/ನೌಕರನು ಕೆಲಸಕ್ಕೆ ಸೇರಿದ ದಿನದಂದು ಮತ್ತು ಪ್ರತಿ ವರ್ಷದ ಮಾರ್ಚ್ 31 ನೇ ದಿನಾಂಕದಂದು ತನ್ನ ಆಸ್ತಿ ಎಷ್ಟಿದೆಯೆಂದು ಚರ-ಸ್ಥಿರ ಆಸ್ತಿ ವಿವರದ ನಮೂನೆಯಲ್ಲಿ ಸರಕಾರಕ್ಕೆ ಮಾಹಿತಿ ಸಲ್ಲಿಸಬೇಕು. ಹಿಂದಿನ ವರ್ಷದ ಆಸ್ತಿಗಿಂತ ಈ ವರ್ಷದ ಆಸ್ತಿ ಹೆಚ್ಚಾದಲ್ಲಿ ಈ ಬಗ್ಗೆ ಸರಕಾರವು ಸಂಬಂಧಿಸಿದ ಅಧಿಕಾರಿ/ನೌಕರನಿಂದ ವಿವರಣೆಯನ್ನು ಪಡೆಯುತ್ತದೆ. ಅದು ನ್ಯಾಯಯುತವಾಗಿದ್ದು, ಸರಕಾರದಿಂದ ಪೂರ್ವಾನುಮತಿ ಪಡೆದಿದ್ದರೆ ಮಾತ್ರ ಅಂಗೀಕರಿಸುತ್ತದೆ. ಇಲ್ಲವಾದಲ್ಲಿ ಶಿಸ್ತು ಕ್ರಮ ಜರುಗಿಸುತ್ತದೆ. 
ಯಾವುದೇ ಸರಕಾರಿ ನೌಕರ ಒಂದು ಮನೆ, ಸೈಟು, ಚಿನ್ನ ಅಥವಾ ಜಮೀನನ್ನು ಕೊಂಡುಕೊಳ್ಳಬೇಕೆಂದು ಬಯಸಿದರೆ, ಖರೀದಿ ಪೂರ್ವದಲ್ಲಿ ಸರಕಾರದಿಂದ ಅನುಮತಿಯನ್ನು ಪಡೆಯುವುದು ಸರಕಾರಿ ನಿಯಮಗಳನ್ವಯ ಕಡ್ಡಾಯವಾಗಿದೆ. ಸರಕಾರವು ಆ ಆಸ್ತಿ ಖರೀದಿಗೆ ಆತನ ಆದಾಯದ ಮೂಲ ಇತ್ಯಾದಿಗಳನ್ನು ಪರಿಶೀಲಿಸಿ ಅದು ನ್ಯಾಯಯುತವಾಗಿದ್ದಲ್ಲಿ ಮಾತ್ರ ಖರೀದಿಗೆ ಅವಕಾಶ ನೀಡುತ್ತದೆ. ಇಲ್ಲದಿದ್ದರೆ ಆತನ ಮನವಿಯನ್ನು ತಿರಸ್ಕರಿಸುತ್ತದೆ. ಇದು ಸರಕಾರದ ನಿಯಮವಾಗಿದೆ.
ಸಾಮಾನ್ಯವಾಗಿ ಲೋಕಾಯುಕ್ತರು ದಾಳಿ ಮಾಡಲು ಕಾರಣವೇನೆಂದರೆ, ಒಬ್ಬ ಸರಕಾರಿ ಅಧಿಕಾರಿ/ನೌಕರನ ಜೀವಮಾನದ ಒಟ್ಟು ಆದಾಯ ಸುಮಾರು 30 ಲಕ್ಷವಿದ್ದರೆ, ಆತನ ಕುಟುಂಬದ ಅಸ್ತಿ 2 ಕೋಟಿ ಮೀರಿತ್ತೆಂದು ದಾಳಿ ನಡೆದ ವೇಳೆಯಲ್ಲಿ ತಿಳಿಸುತ್ತಾರೆ. ಆದರೆ, ಅವರು ಆದಾಯದ ಮೂಲವನ್ನು ಮತ್ತು ಸರಕಾರದಿಂದ ಚರ-ಸ್ಥಿರ ಆಸ್ತಿಯ ವಿವರವನ್ನು ಸರಕಾರದಿಂದ ಪಡೆದುಕೊಂಡು ದಾಳಿ ಮಾಡಿರುವುದಿಲ್ಲ ಎಂಬುದು ಇಲ್ಲಿನ ನಿಜ ಸಂಗತಿ.
ಈಗ ನೀವೇ ಯೋಚನೆ ಮಾಡಿ, ಸರಕಾರಿ ನೌಕರ ಸುಮಾರು ಇಪ್ಪತ್ತು ವರ್ಷಗಳ ಹಿಂದೆ ಬೆಂಗಳೂರಿನಲ್ಲಿ 20000 ಕೊಟ್ಟು ಖರೀದಿಸಿದ ಒಂದು ಸೈಟಿನ ಬೆಲೆ ಇಂದು ಸುಮಾರು 50 ಲಕ್ಷಗಳಷ್ಟಾಗುತ್ತದೆ. ಆತನ ವೇತನ ಉಳಿತಾಯದಿಂದ ಬರುವ ಬಡ್ಡಿ (ಆರ್.ಡಿ./ಜಿ.ಪಿ.ಎಫ್/ಎಲ್.ಐ.ಸಿ.) ಯನ್ನು ದಾಳಿಯ ಸಂದರ್ಭದಲ್ಲಿ ಆದಾಯದ ಮೂಲವಾಗಿ ಲೆಕ್ಕಕ್ಕೇ ಹಿಡಿಯುವುದಿಲ್ಲ. ಅಲ್ಲದೇ, ಒಬ್ಬ ಸರಕಾರಿ ನೌಕರನ ಮನೆ ಮೇಲೆ ದಾಳಿ ಮಾಡಿದ ಸಂದರ್ಭದಲ್ಲಿ, ಆ ನೌಕರನು 20 ವರ್ಷ ಸೇವೆ ಸಲ್ಲಿಸಿದ್ದರೆ, ಆತನಿಗೆ ಸುಮಾರು 50-58 ವರ್ಷಗಳಾಗಿರಬಹುದು. ಅಷ್ಟರಲ್ಲಿ ಆತನು ಎಷ್ಟು ಹಣವನ್ನು ಸೈಟು-ಮನೆ ಮೇಲೆ ಹೂಡಿಕೆ ಮಾಡಿರಬಹುದು? ಆತನ ಹಣ ಮತ್ತು ಸ್ಥಿರ ಆಸ್ತಿಗಳ ಮೌಲ್ಯ ಎಷ್ಟು ಪಟ್ಟು ಹೆಚ್ಚಾಗಿರಬಹುದು? ಇದನ್ನು ಸ್ವಲ್ಪ ವಿವೇಚನೆಯಿಂದ ಯೋಚಿಸಿದರೆ, ದಾಳಿಯ ನಂತರದ ಬೆಳವಣಿಗೆಗಳ (ನ್ಯಾಯಾಲಯದಿಂದ ಖುಲಾಸೆಗೊಂಡ ಪ್ರಕರಣಗಳು) ನಿಜ ರೂಪ ತಿಳಿಯುತ್ತದೆ. ಒಬ್ಬ ಸರಕಾರಿ ನೌಕರನ ಮನೆ ಮೇಲೆ ದಾಳಿ ನಡೆದಾಗ, ಆತನ ಹೆಂಡತಿಯ ಉದ್ಯೋಗದಿಂದ ಬಂದಂತಹ ಆಸ್ತಿ, ತಮ್ಮ ಮಗ-ಮಗಳು, ಚಿಕ್ಕಪ್ಪ-ದೊಡ್ಡಪ್ಪ-ಅವರ ಮಕ್ಕಳ ಆಸ್ತಿಗಳು (ಒಂದೇ ಕುಟುಂಬದಲ್ಲಿ ವಾಸವಿದ್ದ ಪಕ್ಷದಲ್ಲಿ) ಮತ್ತು ಪಿತ್ರಾರ್ಜಿತ ಆಸ್ತಿಯೆಲ್ಲವನ್ನೂ ಸಹ ಒಬ್ಬನೇ ನೌಕರನ ಆಸ್ತಿಯೆಂಬಂತೆ ಲೋಕಾಯುಕ್ತ ದಾಳಿ ವೇಳೆಯಲ್ಲಿ ಬಿಂಬಿಸಲಾಗುತ್ತದೆ. ದಾಳಿಯ ಒಂದು ವಾರವಂತೂ ವಿರೋಧಿಗಳಿಗೆ ಮತ್ತು ಮಾಧ್ಯಮದವರಿಗೆ ಪುಷ್ಕಳ ಭೋಜನ ಸಿಕ್ಕಿರುತ್ತದೆ.
ಆದರೆ, ನಾವು ಆ ನೌಕರನ ಮತ್ತು ಅವರ ಕುಟುಂಬದ ಸದಸ್ಯರು ಮತ್ತು ಬಂಧುಗಳ-ಸ್ನೇಹಿತರ ಮನಸ್ಥಿತಿಯನ್ನು ಅರ್ಥ ಮಾಡಿಕೊಳ್ಳುವುದೇ ಇಲ್ಲ. ಆತನೇನಾದರೂ ಸಜ್ಜನ ನೌಕರನಾಗಿದ್ದು, ಮೀಡಿಯಾದವರ ಚೆಲ್ಲಾಟಕ್ಕೆ ಆತ್ಮಹತ್ಯೆಯ ದಾರಿಯ ಬಗ್ಗೆ ಯೋಚಿಸುವ ಸಂದರ್ಭವು ಸ್ಠಷ್ಠಿಯಾಗುತ್ತದೆ. ಪುಣ್ಯಕ್ಕೆ ಅಂತಹ ಪ್ರಕರಣಗಳು ವಿರಳ.
ಲೋಕಾಯುಕ್ತ ದಾಳಿಯ ನಂತರ ಲೋಕಾಯುಕ್ತದವರು ಅಂದೇ ಎಫ್.ಐ.ಆರ್. ತಯಾರಿಸುತ್ತಾರೆ. ನಂತರ ನ್ಯಾಯಾಲಯದಲ್ಲಿ ಪ್ರಕರಣವನ್ನು ದಾಖಲಿಸಲು ಸರಕಾರದಿಂದ ಅನುಮತಿಯನ್ನು ಪಡೆಯಬೇಕಾಗುತ್ತದೆ. ಲೋಕಾಯುಕ್ತದವರು ದಾಖಲಿಸಿದ ಎಫ್.ಐ.ಆರ್. ನಲ್ಲಿ ತೋರಿಸಿರುವ ಆಸ್ತಿ ಬಗ್ಗೆ ಸರಕಾರವು ಪರಿಶೀಲನೆ ನಡೆಸುತ್ತದೆ. ವಾರ್ಷಿಕ ಚರ-ಸ್ಥಿರ ಆಸ್ತಿಯಲ್ಲಿ ಈ ಮಾಹಿತಿಯನ್ನು ನೌಕರನು ಸರಕಾರಕ್ಕೆ ಮೊದಲೇ ಮಾಹಿತಿ ನೀಡಿದ್ದರೆ ಹಾಗೂ ತನ್ನ ಆದಾಯದ ಮೂಲವನ್ನು ಸರಕಾರಕ್ಕೆ ಮೊದಲೇ ಮಾಹಿತಿ ಒದಗಿಸಿದ್ದರೆ, ಸರಕಾರವು ಅಂತಹ ಪ್ರಕರಣಗಳಲ್ಲಿ ನ್ಯಾಯಾಲಯದಲ್ಲಿ ಆತನ ವಿರುದ್ಧ ದಾವೆ ಹೂಡಲು ನಿರಾಕರಿಸುತ್ತದೆ (ಇದನ್ನು ಅಭಿಯೋಜನಾ ಮಂಜೂರಾತಿ ಎಂದು ಕರೆಯುತ್ತಾರೆ). ಸರಕಾರದ ಮತ್ತು ಲೋಕಾಯುಕ್ತದ ಮಧ್ಯೆ ಇದೇ ವಿಚಾರವಾಗಿ ಜಟಾ-ಪಟಿಯನ್ನು ನಾವು ನೋಡುತ್ತಲೇ ಇರುತ್ತೇವೆ. ಆದರೆ, ಸರಕಾರದ ನಿಖರ ಕಾರಣಗಳನ್ನು ನಾವು ಅರ್ಥ ಮಾಡಿಕೊಳ್ಳುವ ಗೋಜಿಗೇ ಹೋಗುವುದಿಲ್ಲ. ಎಲ್ಲಾ ಸಾಮಾನ್ಯ ನಾಗರೀಕರೆಲ್ಲರೂ ಸರಕಾರಿ ನೌಕರನೆಂದರೆ ಲಂಚವನ್ನು ಪಡೆದುಕೊಳ್ಳದೇ ಕೆಲಸ ಮಾಡುವುದಿಲ್ಲ ಎಂಬ ಮೂಢನಂಬಿಕೆ(?) ಗೆ ಒಳಗಾಗಿದ್ದೇವೆ. ಸರಕಾರಿ ನೌಕರನೆಂದರೆ ಭ್ರಷ್ಠ ಎಂದು ಪೂರ್ವಾಗ್ರಹಪೀಡಿತ ( Prejudicial) ಅಭಿಪ್ರಾಯವನ್ನು ಹೊಂದಿರುತ್ತೇವೆ.
ಎಲ್ಲ ಸರಕಾರಿ ನೌಕರರು ಅಪ್ರಾಮಾಣಿಕರಲ್ಲ. ಈ ಹಿಂದೆ ಇದ್ದಂತಹ ವ್ಯವಸ್ಥೆ ಈಗಿಲ್ಲ. ಕೇವಲ ಕೆಲವೇ ವರ್ಷಗಳಲ್ಲಿ ಸರಕಾರಿ ನೌಕರರ ಕಾರ್ಯನಿರ್ವಹಣೆ ಬದಲಾಗಿದೆ. ದಿನೇ ದಿನ ಸರಕಾವು ಹೊಸ ಕಾನೂನುಗಳನ್ನು ನಿಯಮಗಳನ್ನು ರಚಿಸುತ್ತಾ, ಸರಕಾರಿ ನೌಕರನಿಗೆ ಕಾರ್ಯ ಕ್ಷಮತೆಯನ್ನು ಹೆಚ್ಚಿಸುತ್ತಲೇ ಇದೆ. ಮಾಹಿತಿ ಹಕ್ಕು ವಿಧೇಯಕ, ಸಕಾಲ ಇವುಗಳು ಜನರಿಗೆ ಅನುಕೂಲವಾಗಲು ಮತ್ತು ಭ್ರಷ್ಟತನವನ್ನು ಕಡಿಮೆ ಮಾಡಲು ಉಪಯುಕ್ತವಾಗಿವೆ. ಆದಾಗ್ಯೂ ಕೂಡಾ ಭ್ರಷ್ಟಾಚಾರವನ್ನು ಸಂಪೂರ್ಣ ಕಡಿವಾಣ ಹಾಕಲು ಸಾಧ್ಯವಾಗಿಲ್ಲವಷ್ಟೇ. 
ಸರಕಾರಿ ನೌಕರನ ನಿಧಾನಗತಿ ಕಾರ್ಯನಿರ್ವಹಣೆಗೆ ಸರಕಾರದ ಓಬಿರಾಯನ ಕಾಲದ ನಿಯಮಗಳೇ ಆಗಿವೆ ಎಂಬುದು ಸರ್ವ ವಿಧಿತ. ಉದಾಹರಣೆಗೆ, ಒಬ್ಬ ಸರಕಾರಿ ನೌಕರನ ಹಾಜರಾತಿಯನ್ನು ನಿಖರವಾಗಿಸಲು ಎಷ್ಟೊಂದು ಕಚೇರಿಗಳಲ್ಲಿ ಬಯೋಮೆಟ್ರಿಕ್ ಮೆಷಿನ್ ನ್ನು ಆಳವಡಿಸಿ, ಅದರಲ್ಲಿ ಅವರ ಹೆಬ್ಬೆಟ್ಟು ಒತ್ತಿದಲ್ಲಿ ಮಾತ್ರ ಆತನ ಹಾಜರಾತಿ ಆ ಸಮಯದಲ್ಲಿ ದಾಖಲಾಗುತ್ತದೆ. ಪ್ರತಿ ತಿಂಗಳು ಆ ಮೆಷಿನ್ನಿನಲ್ಲಿ ದಾಖಲಾದ ಡೇಟಾಬೇಸ್ ನಲ್ಲಿ ಆತನು ಯಾವ ದಿನದಂದು ಎಷ್ಟು ಗಂಟೆಗೆ ಕಚೇರಿಗೆ ಆಗಮಿಸಿದ? ಎಷ್ಟು ಸಮಯಕ್ಕೆ ನಿರ್ಗಮಿಸಿದ? ಯಾವ ದಿನಗಳಂದು ಸೇವೆಗೆ ಗೈರು ಹಾಜರಾಗಿದ್ದಾನೆ ? ಎಂಬ ಬಗ್ಗೆ ಸುಲಭವಾಗಿ ತಿಳಿಯಬಹುದು. ಇದರಿಂದ ಎಷ್ಟೊಂದು ಕೆಲಸ ಕಡಿಮೆಯಾಯಿತೆಂದು ನಿಮಗನ್ನಿಸಿತಲ್ಲವೇ? ಆದರೆ, ಅದು ತಪ್ಪು. ಯಾಕೆಂದರೆ, ಆತನು ಬಯೋ ಮೆಟ್ರಿಕ್ ಸಾಧನದಲ್ಲಿ ತನ್ನ ಬೆರಳನ್ನು ಒತ್ತಿ ಹಾಜರಾತಿಯನ್ನು ದಾಖಲಿಸಿದರೆ ಮಾತ್ರವಷ್ಟೇ ಅಲ್ಲ, ಕಚೇರಿ ಕಾರ್ಯವಿಧಾನ ಕೈಪಿಡಿಯಲ್ಲಿ ವಿವರಿಸಿರುವಂತೆ ಹಾಜರಾತಿ ರಜಿಸ್ಟರ್ ನಲ್ಲಿ ಕಡ್ಡಾಯವಾಗಿ ಸಹಿ ಮಾಡಲೇಬೇಕು. ಇಲ್ಲದಿದ್ದಲ್ಲಿ ಗೈರು ಹಾಜರಾತಿ ಎಂದು ಪರಿಗಣಿಸಲ್ಪಡುತ್ತದೆ. ನೌಕರನು ಬಯೋ ಮೆಟ್ರಿಕ್ ನಲ್ಲಿ ಹಾಜರಾತಿ ದಾಖಲಿಸುವುದಲ್ಲದೇ ಹಾಜರಾತಿ ವಹಿಯಲ್ಲಿ ಕೂಡಾ ಸಹಿ ಮಾಡಲೇಬೇಕು. ಇದಕ್ಕೆ ಸರಕಾರವು ಪರಿಶೀಲಿಸಿ ಹಾಜರಾತಿಯು ವಹಿಯಲ್ಲಿ ಸಹಿ ಮಾಡುವುದರಿಂದ ಅಥವಾ ಬಯೋ ಮೆಟ್ರಿಕ್ ಸಾಧನದಲ್ಲಿ ದಾಖಲಿಸುವುದರಿಂದ ಪರಿಗಣಿಸಲ್ಪಡುತ್ತದೆ ಎಂದು ಸಂಬಂಧಿಸಿದ ನಿಯಮಾವಳಿಗಳಿಗೆ ತಿದ್ದುಪಡಿ ತರುವುದು ಅತೀ ಅವಶ್ಯಕವಾಗಿದೆ. (ಬಯೋ ಮೆಟ್ರಿಕ್ ಸಾಧನವು ಚಳಿಗಾಲದಲ್ಲಂತೂ ನಮ್ಮ ಬೆರಳುಗಳ ರೇಖೆಗಳನ್ನು ಗುರುತಿಸುವುದು ಸಾಧ್ಯವಾಗುವುದಿಲ್ಲ. ಬೇಸಿಗೆಯಲ್ಲಿ ಕರೆಂಟು ಕೈಕೊಟ್ಟರೆ ಆತನ ಹಾಜರಾತಿ ದಾಖಲಾಗುವುದೇ ಇಲ್ಲ. ನೌಕರನ ಫಜೀತಿ ದೇವರಿಗೇ ಪ್ರೀತಿ.. ಹ್ಹ ಹ್ಹ...)
ನಮ್ಮ ಸಾಮಾನ್ಯ ಜನರು ಹೇಗೆ ಸರಕಾರಿ ನೌಕರೆಂದರೆ ಮೂಗು ಮುರಿಯುವರೋ ಹಾಗೆಯೇ ರಾಜಕಾರಣಿಗಳು ಕೂಡಾ.. ಆದರೆ, ಅವರು ನೌಕರಶಾಹಿ ವ್ಯವಸ್ಥೆಯನ್ನು ನಮ್ಮದೇ ಒಂದು ಅಂಗ (ಕಾರ್ಯಾಂಗ) ವೆಂದು ಪರಿಗಣಿಸುವುದೇ ಇಲ್ಲ. ಸುಮಾರು 20 ವರ್ಷಗಳ ಹಿಂದೆ ಇದ್ದ ಹುದ್ದೆಗಳೇ ಈಗಲೂ ಇವೆ. ಹೆಚ್ಚಿಗೆ ಮಾಡಲು ಯಾರೂ ಸಹ ತಲೆ ಕೆಡಿಸಿಕೊಳ್ಳುವ ಗೋಜಿಗೆ ಹೋಗುವುದಿಲ್ಲ. 20 ವರ್ಷಗಳಲ್ಲಿ ಜನಸಂಖ್ಯೆ ಹೆಚ್ಚಿಗೆಯಾಗಿದೆ. ಬೇಡಿಕೆಗಳು ಜಾಸ್ತಿಯಾಗಿವೆ. ಆದರೆ, ಅದೇ ಒಂದು ಸರಕಾರಿ ಕಚೇರಿಯಲ್ಲಿ ಇರುವ 02 ದ್ವಿತೀಯ ದರ್ಜೆ ಸಹಾಯಕನ ಹುದ್ದೆಗಳು ಅಷ್ಟೇ ಇವೆ. ಇದು ಕಚೇರಿ ಕಾರ್ಯನಿರ್ವಹಣೆಯ ನಿಧಾನಗತಿಗೆ ಒಂದು ಕಾರಣವಾದರೆ, ಇನ್ನೂ ಸರಕಾರಿ ಇಲಾಖೆಗಳಲ್ಲಿ ಖಾಲಿ ಇರುವ 1.20 ಲಕ್ಷ ಹುದ್ದೆಗಳು ಖಾಲಿ ಇರುವುದು ಸಹ ಇನ್ನೊಂದು ಮುಖ್ಯ ಕಾರಣವಾಗಿದೆ. 
ನನ್ನ ಲೇಖನದ ಉದ್ದೇಶವೆಂದರೆ, ಲೋಕಾಯುಕ್ತ ದಾಳಿಗೊಳಗಾದ ಅಧಿಕಾರಿ/ನೌಕರರೆಲ್ಲರೂ ಭ್ರಷ್ಟರಲ್ಲ. ಸರಕಾರ ಮತ್ತು ಲೋಕಾಯುಕ್ತ ನಡುವೆ ಜಟಾಪಟಿಯ ಮೂಲ ಕಾರಣ ಮತ್ತು ಸರಕಾರವು ದಾಳಿಗೊಳಗಾದ ನೌಕರನ ಮೇಲೆ ನ್ಯಾಯಾಲಯದಲ್ಲಿ ಕೇಸು ದಾಖಲಿಸಲು ಅನುಮತಿ ನೀಡುತ್ತಿಲ್ಲವೇಕೆ? ಎಂಬ ಬಗ್ಗೆ ಆಗಿದೆ. ನನ್ನ ಮಟ್ಟಿಗೆ ಸಾಧ್ಯವಾದಷ್ಟು ಮಾಹಿತಿಯನ್ನು ಒದಗಿಸಿದ್ದೇನೆ. ಹೇಳುವುದು ಇನ್ನೂ ಬಾಕಿ ಇದೆ..
ಇಂತಿ ನಿಮ್ಮ ಪ್ರೀತಿಯ
ಶಿವಶಂಕರ ವಿಷ್ಣು ಯಳವತ್ತಿ

01 April 2014

"ಉಳಿದವರು ಕಂಡಂತೆ" ಸಿನಿಮಾದ ಬಗ್ಗೆ ನಟ ಮತ್ತು ನಿರ್ದೇಶಕ ರಕ್ಷಿತ್ ಶೆಟ್ಟಿ ರವರಿಗೆ ಚಿತ್ರದ ವಿಮರ್ಶೆ.

Rakshit Shetty... (ನಟ ಮತ್ತು ನಿರ್ದೇಶಕ)

(ಉಳಿದವರು ಕಂಡಂತೆ ಸಿನಿಮಾವನ್ನು ನಾನು ಕಂಡಂತೆ....)


ಹಾಯ್ ಸರ್,

ಉಳಿದವರು ಕಂಡಂತೆ ಸಿನಿಮಾವನ್ನು ಶನಿವಾರವೇ ನೋಡಿದೆ. ನಮ್ಮ ಗದಗ ದಲ್ಲಿ ಕೃಷ್ಣಾ ಥಿಯೇಟರ್ ನಲ್ಲಿ ಸರಿಯಾಗಿ ಸೌಂಡ್ ಕೇಳಿಸಲಿಲ್ಲವೋ ಅಥವಾ ಆ ಸಿನಿಮಾದಲ್ಲಿ ಬ್ಯಾಕ್ ಗ್ರೌಂಡ್ ಮ್ಯೂಸಿಕ್ ಜಾಸ್ತಿಯಾಯ್ತೋ ಗೊತ್ತಿಲ್ಲ, ಡೈಲಾಗ್ ಗಳು ಸರಿಯಾಗಿ ಕೇಳಿಸಲಿಲ್ಲ ಮತ್ತು ಕೆಲವು ಡೈಲಾಗ್ ಗಳು ಅರ್ಥವಾಗಲಿಲ್ಲ.

ಸಿನಿಮಾ ಶೈಲಿ ವಿಭಿನ್ನವಾಗಿದೆ. ಹೈ-ಕ್ಲಾಸ್ ಲೆವೆಲ್ ಸಿನಿಮಾ. ಆದರೆ, ನಮ್ಮ ಜನಕ್ಕೆ ಅಷ್ಟು ಸುಲಭವಾಗಿ ಒಪ್ಪಿಕೊಳ್ಳಲು ಕಷ್ಟವಾಗುತ್ತೆ. ಎಲ್ಲರ ನಟನೆ ತುಂಬಾ ಚನ್ನಾಗಿದೆ. ನಿಮ್ಮ ನಟನೆ ಅದೂ ಹುಲಿ ವೇಷದಲ್ಲಿ ಡ್ಯಾನ್ಸ್ ಮಾಡೋದು ಮತ್ತು ನೀವು ನಡೆಯುವ ಸ್ಟೈಲ್ ಜಾಸ್ತಿ ಇಷ್ಟವಾಯ್ತು.

ಇನ್ನು ಎರಡು ಹಾಡುಗಳು ಚನ್ನಾಗಿವೆ. ಪೇಪರ್ ಪೇಪರ್ ಹಾಡು ತುಂಬಾ ಚನ್ನಾಗಿ ಮೂಡಿ ಬಂದಿದೆ. ಕೆಲವೊಂದು ಕಡೆ ಸಿನಿಮಾ ಬೋರ್ ಹೊಡೆಸುತ್ತೆ. ಪ್ರಾರಂಭದ ಅಧ್ಯಾಯಗಳಲ್ಲಿ ನಿಮ್ಮ ಪಾತ್ರ ಜಾಸ್ತಿ ಕ್ರೂರವೆಂದು ತೋರಿಸೋದು ಸ್ವಲ್ಪ ಜಾಸ್ತೀನೇ ಆಯ್ತು.

ಸಿನಿಮಾದಲ್ಲಿ ಸಖತ್ ಎಂಜಾಯ್ ಮಾಡಿದ್ದು, "ಅಯ್ಯಯ್ಯಯ್ಯೋ.. ನಗ್ತಾಳಲ್ಲೋ" ಹಾಡು. ಈ ಹಾಡಿಗಾಗಿ ಮತ್ತೆ ಸಿನಿಮಾ ನೋಡಬಹುದು. ಕಿಶೋರ್ ಕೂಡಾ ಅಭಿನಯದಿಂದ ಎಲ್ಲರಿಗೂ ಇಷ್ಟವಾಗ್ತಾರೆ.. ಡೆಮಾಕ್ರಸಿ ಹುಡುಗ ಅರ್ಧ ಸಿನಿಮಾ ಆವರಿಸಿ, ನೆನಪಿನಲ್ಲಿಟ್ಟುಕೊಳ್ಳುವಂತೆ ಅಭಿನಯಿಸಿದ್ದಾನೆ. ಆತನಿಗೆ ಒಳ್ಳೆಯ ಭವಿಷ್ಯ ಇದೆ.

ಹಾಸ್ಯದ್ದೇ ಸಿನಿಮಾದಲ್ಲಿನ ಬಹುದೊಡ್ಡ ಕೊರತೆ. ಕಥೆ ಹೇಳುವ ಭರದಲ್ಲಿ ಹಾಸ್ಯವನ್ನೇ ಮರೆತಿದ್ದೀರ ನಿರ್ದೇಶಕರೇ.. ಏನೇ ಇದ್ದರೂ ಒಂದು ಬಾರಿ ನೋಡಬಹುದಾದ ಸಿನಿಮಾ ಎಂದು ಹೇಳಲಷ್ಟೇ ಸಾಧ್ಯ. ಇನ್ನೂ ಚನ್ನಾಗಿ ಸಿನಿಮಾ ತಯಾರಿಸಬಹುದಿತ್ತು. ಒಂದೆರಡು ಚಾಪ್ಟರ್ ಗಳು ಹಿಂದು ಮುಂದಾಗಿವೆಯೇನೋ ಅನ್ನಿಸುತ್ತದೆ.

ಅದು ಏನೇ ಇರಲಿ. ಮತ್ತೆ ಹೇಳುತ್ತಿದ್ದೇನೆ, "ಉಳಿದವರು ಕಂಡಂತೆ" ಹೈ-ಕ್ಲಾಸ್ ಲೆವೆಲ್ ಸಿನಿಮಾ. ನಮ್ಮ ಜನಕ್ಕೆ ಅಷ್ಟು ಸುಲಭವಾಗಿ ಒಪ್ಪಿಕೊಳ್ಳಲು ಕಷ್ಟವಾಗುತ್ತೆ.

ಇಂತಿ ನಿಮ್ಮ ಪ್ರೀತಿಯ,

ಶಿವಶಂಕರ ವಿಷ್ಣು ಯಳವತ್ತಿ.
www.shivagadag.blogspot.com

30 March 2014

ಅತೀ ಹೆಚ್ಚು ಬ್ಯಾಟರಿ ಬ್ಯಾಕ್ ಅಪ್ ಇರುವ ಸಾಮಾನ್ಯ ಬೆಲೆಯ ಆಂಡ್ರಾಯ್ಡ್ ಫೋನ್


ಹೊಸ ಆಡ್ರಾಯ್ಡ್ ಮೊಬೈಲ್ ತೆಗೆದುಕೊಳ್ಳಬೇಕಿತ್ತು. ಐದತ್ತು ರೂಪಾಯಿಯ ಪೆನ್ನನ್ನು ತೆಗೆದುಕೊಳ್ಳಲು ನೂರೆಂಟು ಸಲ ಪರೀಕ್ಷಿಸುವ ನಾವು ಹತ್ತಾರು ಸಾವಿರ ರೂಪಾಯಿಗಳನ್ನು ಕೊಟ್ಟು ಕೊಳ್ಳುವ ಮೊಬೈಲ್ ಬಗ್ಗೆ ಪರೀಕ್ಷಿಸದಿದ್ದರೆ ಹೇಗೇ?

ಇದೇ ರೀತಿ ಉತ್ತಮ ಆಡ್ರಾಯ್ಡ್ ಮೊಬೈಲ್ ಗಾಗಿ ಸುಮಾರು ತಿಂಗಳುಗಳಿಂದ ಹುಡುಕುತ್ತಲೇ ಇದ್ದೆ. ಒಂದರಲ್ಲಿ ಕೆಮೆರಾಗೆ ಹೆಚ್ಚು ಒತ್ತು ಕೊಟ್ಟಿದ್ದರೆ, ಇನ್ನೊಂದರಲ್ಲಿ ಆಪರೇಟಿಂಗ್ ಸಿಸ್ಟಮ್, ವೇಗಕ್ಕೆ ಹೆಚ್ಚು ಒತ್ತು ಕೊಟ್ಟಿರುತ್ತಿದ್ದರೆ. ಉತ್ತಮ ಮೊಬೈಲ್ ತೆಗೆದುಕೊಂಡರೂ ಸಹ ಒಂದಿಲ್ಲೊಂದು ಕೊರತೆ ಇದ್ದೇ ಇರುತ್ತಿತ್ತು. ಎಲ್ಲ ಫೀಚರ್ ಗಳು ಉತ್ತಮವಾಗಿದ್ದರೆ ಅದರ ಬೆಲೆ ಅತೀ ಹೆಚ್ಚಿನದ್ದಿರುತ್ತಿತ್ತು.

ಹೋಗಲಿ, ಉತ್ತಮ ಫೀಚರ್ ಗಳಿರುವ ಹೆಚ್ಚಿನ ಬೆಲೆಯ (ಸುಮಾರು 10 ರಿಂದ 25 ಸಾವಿರದ ಒಳಗಿನ) ಫೋನನ್ನು ತೆಗೆದುಕೊಂಡರೂ ಸಹ ಎಲ್ಲಾ ಮೊಬೈಲ್ ಗಳಲ್ಲಿ ಇರುವ ಸಾಮಾನ್ಯವಾದ ಬ್ಯಾಟರ್ ಬ್ಯಾಕ್ ಅಪ್ ಸಮಸ್ಯೆ ಇದ್ದೇ ಇರುತ್ತಿತ್ತು. ಕಡಿಮೆ ಬೆಲೆಯ ಆಂಡ್ರಾಯ್ಡ್ ಫೋನ್ ಗಳಲ್ಲಿ ಬ್ಯಾಟರಿ ಸಾಮರ್ಥ್ಯ 1300 ಎಂ.ಎ.ಎಚ್ ನಿಂದ 1500 ಎಂ.ಎ.ಎಚ್. ವರೆಗೆ ಇರುತ್ತಿತ್ತು. ಹೆಚ್ಚಿನ ಬೆಲೆಯ ಫೋನ್ ಗಳಲ್ಲಿ 2100 ಎಂ.ಎ.ಎಚ್ ವರೆಗೆ ಬ್ಯಾಟರಿ ಬ್ಯಾಕ್ ಅಪ್ ಇರುತ್ತಿತ್ತು. (ಎಂ.ಎ.ಎಚ್= ಮಿಲಿ ಎಂಪ್ ಅವರ್ಸ್.. ಇದು ಹೆಚ್ಚಿಗೆ ಇದ್ದಷ್ಟು ಬ್ಯಾಟರಿ ಹೆಚ್ಚು ಹೊತ್ತು ಇರುತ್ತದೆ)

ಹೆಚ್ಚಿನ ಬ್ಯಾಟರಿ ಬ್ಯಾಕ್ ಅಪ್ ಇರುವ ಆಂಡ್ರಾಯ್ಡ್ ಫೋನ್ ಗಳಿಗೆ ಹುಡುಕಿ ಹುಡುಕಿ ಸಾಕಾಗಿತ್ತು. ಅಷ್ಟರಲ್ಲೇ ನನ್ನ ಕಣ್ಣಿಗೆ ಬಿದ್ದಿದ್ದು, ಜಿಯೋನಿ ಕಂಪನಿಯ "ಜಿಯೋನಿ ಎಂ2" ಮಾಡೆಲ್ ನ ಮೊಬೈಲ್. ಸುಮಾರು 11000 ಸಾವಿರ ರೂಪಾಯಿಗಳಿಗೆ ಸಿಕ್ಕುವ ಈ ಮೊಬೈಲ್ ಸಧ್ಯಕ್ಕೆ ಅತೀ ಹೆಚ್ಚು ಬ್ಯಾಟರಿ ಬ್ಯಾಕಪ್ 4200 ಎಂ.ಎ.ಎಚ್. ಹೊಂದಿದೆ. ಇನ್ನುಳೀದಂತೆ,

ಜಿಯೋನೀ ಎಂ2 ವಿಶೇಷತೆ: ಡ್ಯುಯಲ್‌ ಸಿಮ್‌ 5 ಇಂಚಿನ ಕೆಪಾಸಿಟಿವ್‌ ಟಚ್‌ಸ್ಕ್ರೀನ್‌(480 x 854 ಪಿಕ್ಸೆಲ್‌) ಆಂಡ್ರಾಯ್ಡ್ 4.2 ಜೆಲ್ಲಿ ಬೀನ್‌ ಓಎಸ್‌ 1.3 GHz ಕಾರ್ಟೆ‌ಕ್ಸ್‌ ಎ7 ಪ್ರೊಸೆಸರ್‌ 4ಜಿಬಿ ಆಂತರಿಕ ಮೆಮೊರಿ 1ಜಿಬಿ ರ್‍ಯಾಮ್‌ 32ಜಿಬಿವರೆಗೆ ವಿಸ್ತರಿಸಬಹುದಾದ ಶೇಖರಣಾ ಸಾಮರ್ಥ್ಯ3ಜಿ,ವೈಫೈ,ಬ್ಲೂಟೂತ್‌,ಜಿಪಿಎಸ್‌ 3ಜಿ,ವೈಫೈ,ಬ್ಲೂಟೂತ್‌,ಜಿಪಿಎಸ್‌, 8 ಮೆಗಾಪಿಕ್ಸೆಲ್ ಕ್ಯಾಮೆರಾ, ಎಲ್.ಇ.ಡಿ. ಫ್ಯಾಶ್, ಪ್ರಿಲೋಡೆಡ್ ಕಿಂಗ್ ಸಾಫ್ಟ್ ಆಫೀಸ್, ವಾಟ್ಸ್ ಅಪ್, ವಿ ಚಾಟ್, ಬ್ಯಾಟರಿ ಸೇವರ್ ತಂತ್ರಾಂಶಗಳಂತಹ ವಿಶೇಷತೆಗಳು ಇವೆ.

ಸುಮಾರು ಹದಿನೈದು ದಿನಗಳಿಂದ ಈ ಮೊಬೈಲನ್ನು ಉಪಯೋಗಿಸುತ್ತಿದ್ದೇನೆ. ಸದಾಕಾಲ ಇಂಟರ್ ನೆಟ್ ಆನ್ ಮಾಡಿ ಇಟ್ಟರೂ, ಗೇಮ್ ಆಡಿದರೂ ಕಡಿಮೆ ಎಂದರೆ ಮೂರು ದಿನಗಳವರೆಗೆ ಬ್ಯಾಟರಿ ಬರುತ್ತದೆ. ಇಂಟರ್ ನೆಟ್ ಬಳಸದೇ, ಸಾಮಾನ್ಯವಾಗಿ ಫೋನ್ ನನ್ನು ಉಪಯೋಗಿಸಿದರೆ, ವಾರದವರೆಗೆ ಬ್ಯಾಟರಿ ಲಭ್ಯ. ನನ್ನ ಪರಿಚಯದವರೆಲ್ಲರೂ ಇದೇ ಫೋನ್ ಖರೀದಿಸಲು ಶಿಫಾರಸ್ಸು ಮಾಡಿದ್ದೇನೆ. ಈಗಾಗಲೇ 5 ಜನ ಖರೀದಿಸಿಯಾಗಿದೆ. ನೀವೇನಾದರೂ ಹೊಸ ಮೊಬೈಲ್ ಖರೀದಿಸಬೇಕೆಂದಿದ್ದರೆ, ನನ್ನ ವೋಟು ಜಿಯೋನಿ ಎಂ2 ಗೆ..

ಇನ್ನೂ ಹೆಚ್ಚಿನ ಮಾಹಿತಿಗಾಗಿ ಈ ವಿಳಾಸವನ್ನು ಸಂಪರ್ಕಿಸಿ

1) http://kannada.gizbot.com/mobile/gionee-gpad-g4-m2-with-3g-support-android-4-2-launched-india-005597.html

2) http://www.gsmarena.com/gionee_m2-6086.php


ಇಂತಿ ನಿಮ್ಮ ಪ್ರೀತಿಯ

ಶಿವಶಂಕರ ವಿಷ್ಣು ಯಳವತ್ತಿ.


10 February 2014

ಕರ್ನಾಟಕ ರಾಜ್ಯ ಸರಕಾರಿ ನೌಕರರಿಗೆ ವಾರದಲ್ಲಿ ಎರಡು ದಿನ ರಜೆ ನೀಡಬೇಕೆ ಬೇಡವೇ? ವಿಸ್ತೃತ ಲೇಖನ

ನಾನು ಫೇಸ್ ಬುಕ್ ನಲ್ಲಿ ಒಂದು ಪ್ರಶ್ನೆ ಹಾಕಿದ್ದೆ, ಕರ್ನಾಟಕ ರಾಜ್ಯ ಸರಕಾರಿ ನೌಕರರಿಗೆ ಕೇಂದ್ರ ಸರಕಾರದ ಮಾದರಿಯಲ್ಲಿ ವಾರಕ್ಕೆ ಎರಡು ದಿನ (ಶನಿವಾರ ಮತ್ತು ಭಾನುವಾರ) ಎರಡು ದಿನಗಳ ಕಾಲ ರಜೆ ನೀಡಬೇಕೆ, ಬೇಡವೇ? ಎಂಬ ಬಗ್ಗೆ.. ಹಲವರು ಈ ಪ್ರಶ್ನೆಗೆ ತಮ್ಮ ಅಭಿಪ್ರಾಯಗಳನ್ನು ಸಲ್ಲಿಸಿದ್ದಾರೆ. ಶೇ. 80 ರಷ್ಟು ಜನರು ವಾರಕ್ಕೆ ಎರಡು ದಿನ ರಜೆ ಬೇಕು ಎಂದು ಹೇಳಿದರೆ, ಇನ್ನುಳಿದ ಶೇ.20 ರಷ್ಟು ಜನರು ರಜೆ ಬೇಡ ಎಂದು ಅಭಿಪ್ರಾಯಪಟ್ಟಿದ್ದಾರೆ.

ಸರಕಾರಿ ನೌಕರರು ಕೂಡ ತಮ್ಮ ಕೆಲಸಗಳನ್ನು ಪೂರೈಸಿಕೊಳ್ಳಲು ಎರಡು ದಿನ ರಜೆ ಕೊಡಬೇಕು ಎಂದರು. ಕೆಲವರು ಧ್ರುವ ಸಿನಿಮಾದಲ್ಲಿನ ಸಾಧು ಕೋಕಿಲ ರವರ ಡೈಲಾಗನ್ನು ನೆನಪಿಸಿ, ಈಗ ಇರೋ ರಜೆಗಳೇ ಸಾಕಷ್ಟಿವೆ, ಮತ್ತೆ ಎಕ್ಸ್ಟಾ ರಜೆನಾ? ಅಂತಾ ಮೂದಲಿಸಿದರು.

ಈಗ ನಾನು ವಿಷಯಕ್ಕೆ ಬರುತ್ತೇನೆ. ಸರಕಾರಿ ನೌಕರರಿಗೆ ಕೇಂದ್ರ ಸರಕಾರಿ ನೌಕರರಿಗೆ ಇರುವ ರೀತಿಯಲ್ಲಿ ವಾರಕ್ಕೆರಡು ದಿನ (ಶನಿವಾರ ಮತ್ತು ಭಾನುವಾರ) ರಜೆ ಕೊಡಬೇಕೆ ಬೇಡವೇ ? ಎಂಬುದನ್ನು ನನಗೆ ತಿಳಿದಷ್ಟು ಮಟ್ಟಿಗೆ ಸಾಧ್ಯಂತವಾಗಿ ವಿವರಿಸಲು ಪ್ರಯತ್ನಿಸುತ್ತೇನೆ.

ನನ್ನ ಪ್ರಕಾರ ರಾಜ್ಯ ಸರಕಾರಿ ನೌಕರರಿಗೆ ಕೇಂದ್ರದ ಮಾದರಿಯಲ್ಲಿ ಕಡ್ಡಾಯವಾಗಿ ವಾರಕ್ಕೆ ಎರಡು ದಿನ ರಜೆಯನ್ನು ಕೊಡಲೇಬೇಕು.. ಇದರಿಂದ ಉಪಯೋಗಗಳು ಕೂಡಾ ಇವೆ..

ಮೊದಲು ಸರಕಾರಿ ನೌಕರರಿಗೆ ವಾರಕ್ಕೆ ಐದು ದಿನಗಳ ಕರ್ತವ್ಯ ನಿರ್ವಹಣೆಯು ಹೊಸ ಪದ್ಧತಿಯಲ್ಲ. ಕೇಂದ್ರ ಸರಕಾರದ ಕಚೇರಿಗಳಲ್ಲಿ ವಾರಕ್ಕೆ ಎರಡು ದಿನ ರಜೆ ನೀಡಿ, ಉಳಿದ ಐದು ದಿನ ಕರ್ತವ್ಯದ ದಿನಗಳೆಂದು ಕಾರ್ಯನಿರ್ವಹಿಸಲಾಗುತ್ತಿದೆ. ಅನೇಕ ಅಭಿವೃದ್ಧಿ ಹೊಂದಿದ ಮತ್ತು ಹೊಂದುತ್ತಿರುವ ರಾಷ್ಟಗಳಲ್ಲಿ ಅಲ್ಲದೇ, ಭಾರತದ ಖಾಸಗೀ ಕಂಪನಿಗಳಲ್ಲಿ ಕೂಡಾ ವಾರಕ್ಕೆ ಎರಡು ದಿನ ರಜೆ ನೀಡಲಾಗುತ್ತಿದೆ. ತಮಾಷೆಯೇನೆಂದರೆ, ಅಭಿವೃದ್ಧಿ ಹೊಂದದ ರಾಷ್ಟಗಳಲ್ಲಿ ಹೆಚ್ಚುವರಿ ಸಮಯಗಳಲ್ಲಿ ಕಾರ್ಯನಿರ್ವಹಿಸಲಾಗುತ್ತಿದ್ದರೂ ಕೂಡಾ ಅವು ಅಭಿವೃದ್ಧಿ ಹೊಂದಿರುವುದಿಲ್ಲ. ಕರ್ನಾಟಕ ಸರಕಾರವು ರಚಿಸಿದ ಅರನೇ ವೇತನ ಆಯೋಗದಲ್ಲಿ (ಅಧಿಕಾರಿಗಳ ಸಮಿತಿ) ಕೂಡಾ ವಾರಕ್ಕೆ ಐದು ದಿನಗಳ ಕರ್ತವ್ಯನಿರ್ವಹಣೆ ಹಾಗೂ ಎರಡು ದಿನಗಳ ರಜೆಯು ಸೂಕ್ತವೆಂದು ಶಿಫಾರಸ್ಸು ಮಾಡಿದೆ. ನಾನು ವಿವರಿಸುತ್ತಿರುವ ಅಂಶಗಳು 6ನೇ ವೇತನ ಆಯೋಗದ ಶಿಫಾರಸ್ಸಿನಲ್ಲಿನ ಅಂಶಗಳಾಗಿವೆ.

ಈ ಶಿಫಾರಸ್ಸಿಗೆ ಕಾರಣವೇನೆಂದು ತಿಳಿದುಕೊಳ್ಳೋಣ.
ಒಂದೇ ಸಮನೆ ವಾರಕ್ಕೆ ಆರು ದಿನ ಕರ್ತವ್ಯ ನಿರ್ವಹಿಸಿ, ಉಳಿದ ಒಂದು ದಿನ ಮಾತ್ರ ರಜೆಯನ್ನು ನೀಡಿದಲ್ಲಿ, ಸಹಜವಾಗಿ ಆಯಾಸ/ದಣಿವು ಹೆಚ್ಚುತ್ತದೆ. ಇದರಿಂದ ಕೆಲಸದಲ್ಲಿನ ಕಾರ್ಯಕ್ಷಮತೆಯಲ್ಲಿ ಕುಂದುಂಟಾಗಿ, ಗುಣಮಟ್ಟದ ಕೆಲಸಗಳನ್ನು ನಿರೀಕ್ಷಿಸಲು ಸಾಧ್ಯವಾಗುವುದಿಲ್ಲ.

ಆಸಕ್ತಿದಾಯಕ ವಿಷಯವೇನೆಂದರೆ, ವಾರದಲ್ಲಿ ಐದು ದಿನಗಳು ಕಾರ್ಯನಿರ್ವಹಿಸುವ ಸಂಸ್ಥೆಗಳು ವಾರಕ್ಕೆ ಆರು ದಿನ ಕೆಲಸ ನಿರ್ವಹಿಸುವ ಸಂಸ್ಥೆಗಳಿಗಿಂತ ಹೆಚ್ಚಿಗೆ ಸಮಯ ಕಾರ್ಯನಿರ್ವಹಿಸುತ್ತವೆ...!! ಹೇಗೆಂದರೆ, ಉದಾಹರಣೆಗೆ, ವಾರದಲ್ಲಿ ಐದು ದಿನಗಳು ಕಾರ್ಯನಿರ್ವಹಿಸುವ ಭಾರತ ಸರ್ಕಾರದ ಕಚೇರಿಗಳು 2011 ರಲ್ಲಿ ಕಾರ್ಯನಿರ್ವಹಿಸಿದ ಅವಧಿ ಒಟ್ಟು 1560 ಘಂಟೆಗಳು. ಇದಕ್ಕೆ ಹೋಲಿಸಿದರೆ, ಕರ್ನಾಟಕ ರಾಜ್ಯ ಸರಕಾರವು ವಾರದಲ್ಲಿ ಆರು ದಿನಗಳ ಕಾರ್ಯವ್ಯವಸ್ಥೆಯಲ್ಲಿ ಕಾರ್ಯನಿರ್ವಹಿಸಿದ ಅವಧಿ ಒಟ್ಟು 1490 ಘಂಟೆಗಳು. ಐದುದಿನಗಳ ವಾರದ ಕಚೇರಿ ಕಾರ್ಯನಿರ್ವಹಿಸುತ್ತಿರುವ ರಾಜ್ಯಗಳಾದ ಬಿಹಾರ್, ದೆಹಲಿ, ಗೋವಾ, ರಾಜಸ್ಥಾನ್, ಉತ್ತರ ಪ್ರದೇಶ್ ಮತ್ತು ಉತ್ತರಾಖಂಡ್ ಅಧಿಕ ಘಂಟೆಗಳ ಕಾಲ ಕಾರ್ಯನಿರ್ವಹಿಸಿರುತ್ತವೆ. ಆದ್ದರಿಂದ ಸಂಸ್ಥೆಯು ದಕ್ಷ ಹಾಗೂ ಸಮರ್ಥ ರೀತಿಯಲ್ಲಿ ಕಾರ್ಯನಿರ್ವಹಿಸಲು ಅನುಕೂಲವಾಗುವಂತೆ ವಿವೇಚನಾಪೂರ್ಣವಾಗಿ ರಜಾ ದಿನಗಳನ್ನು ಕಡಿತಗೊಳಿಸಿ, ಅಂದರೆ ವಾರ್ಷಿಕ ಇರುವ 15 ದಿನಗಳ ಸಾಂಧರ್ಭಿಕ ರಜಾ ದಿನಗಳನ್ನು 10 ಕ್ಕೆ ಇಳಿಸುವುದು. ಎಲ್ಲಾ ಜಯಂತಿಗಳಲ್ಲಿ ರಜಾ ಕೊಡುವುದನ್ನು (ಒಂದೆರಡು ಬಿಟ್ಟು) ನಿಷೇಧಿಸುವುದು. ಕೇಂದ್ರ ಸರಕಾರವು ನೀಡುವ ಕೆಲವು ಹಬ್ಬಗಳಿಗೆ ಮಾತ್ರ ಸಾರ್ವಜನಿಕ ರಜೆಯನ್ನು ನೀಡುವುದು.  ದಿನದ ಕಾರ್ಯಾವಧಿಯನ್ನು ಹೆಚ್ಚಿಸುವುದು ಅಂದರೆ, ದಿನ ಬೆಳಿಗ್ಗೆ 10 ಗಂಟೆಯಿಂದ 05.30 ರವರೆಗೆ (ಮಧ್ಯದಲ್ಲಿ 45 ನಿಮಿಷಗಳ ಊಟದ ಅವಧಿ) ಕೆಲಸದ ವೇಳೆಯ ಬದಲಾಗಿ ಬೆಳಿಗ್ಗೆ 09.30 ರಿಂದ ಸಂಜೆ 06 ರವರೆಗೆ (ಊಟದ ಸಮಯ 30 ನಿಮಿಷಗಳಿಗೆ ನಿಗದಿ)  ನಿರಂತರವಾಗಿ ಐದು ದಿನಗಳ ವಾರದ ಕಚೇರಿ ಕಾರ್ಯನಿರ್ವಹಣೆಯನ್ನು ಜಾರಿಗೆ ತರುವುದು ಸೂಕ್ತವಾಗಿದೆ.    

ಈ ರೀತಿಯಾಗಿ ಐದು ದಿನಗಳ ಕಾರ್ಯನಿರ್ವಹಣೆಯನ್ನು ಜಾರಿಗೆ ತರುವುದರಿಂದ ಹಲವಾರು ಉಪಯೋಗಗಳು ಸಾರ್ವಜನಿಕರಿಗೆ ಕೂಡಾ ಇವೆ. ಹೇಗೆಂದರೆ, ವಿಶೇಷವಾಗಿ ನಮ್ಮ ಬೆಂಗಳೂರು ನಗರವು ನಮ್ಮ ದೇಶದಲ್ಲಿಯೇ ಅತ್ಯಂತ ವೇಗವಾಗಿ ಬೆಳೆಯುವ ನಗರವಾಗಿದ್ದು, ಭಾರತದಲ್ಲಿಯೇ ಅತ್ಯಂತ ಹೆಚ್ಚು ವಾಹನಗಳನ್ನು ಹೊಂದಿರುವ ಎರಡನೇ ನಗರವಾಗಿದೆ. ನಗರದ ರಸ್ತೆಗಳು ಅಧಿಕ ವಾಹನ ದಟ್ಟಣೆಯಿಂದಾಗಿ ವಾತಾವರಣವು ಮಾಲಿನ್ಯಗೊಂಡಿದೆ. ಅತ್ಯಧಿಕ ನಗರೀಕರಣ ಹಾಗೂ ಕೈಗಾರಿಕೀಕರಣದಿಂದಾಗಿ ವಿದ್ಯುತ್ ಹಾಗೂ ಇಂಧನದ ಲಭ್ಯತೆಯ ಮಿತಿಯನ್ನು ಬೇಡಿಕೆಯು ಅಗತ್ಯತೆಗೆ ಅನುಗುಣವಾಗಿ ಸರಬರಾಜು ಮಾಡಲು ಸಾಧ್ಯವಾಗದ ಪರಿಸ್ಥಿತಿ ಉಂಟುಮಾಡಿದೆ. ಇದೇ ಸಮಯದಲ್ಲಿ ಮಾಹಿತಿ ತಂತ್ರಜ್ಞಾನದ ಕೊಡುಗೆಯಿಂದಾಗಿ ನಾಗರೀಕರು ತಮ್ಮ ವಿದ್ಯುತ್ ಮತ್ತು ನೀರಿನ ಬಿಲ್ಲುಗಳನ್ನು ಪಾವತಿಸಲು ಸರತಿಯ ಸಾಲಿನಲ್ಲಿ ನಿಂತು ಕಾಯಬೇಕಿಲ್ಲ. ಬಸ್ ಟಿಕೆಟ್ ಗಳ ಮುಂಗಡ ಕಾಯ್ದಿರಿಸುವಿಕೆಯನ್ನು ಆನ್ ಲೈನ್ ಮುಖಾಂತರ ಮಾಡಬಹುದಾಗಿದೆ. ಆಸ್ತಿ ತೆರಿಗೆ ಮಾರಾಟ ತೆರಿಗೆ, ಮುಂತಾದುವುಗಳನ್ನು ನಾಗರೀಕರು ಮನೆಯಲ್ಲಿಯೇ ಕುಳಿತು ಆನ್ ಲೈನ್ ಮೂಲಕ ಪಾವತಿಸಬಹುದಾಗಿದ್ದು, ಸರಕಾರ ಮತ್ತು ನಾಗರೀಕರ ನಡುವಿನ ವ್ಯವಹಾರವು ಶೀಘ್ರ, ಸುಲಭ ಹಾಗೂ ಸುಲಲಿತವಾಗಿ ನಡೆಯುವಂತಾಗಿದೆ. ಇತ್ತೀಚಿನ ಅಧಿನಿಯಮGuarantee to Service Act”, ಅನ್ವಯ ನಾಗರೀಕರಿಗೆ ಕಾಲಮಿತಿಯಲ್ಲಿ ನಾಗರೀಕರಿಗೆ ನಿಗದಿತ ಕಾಲಮಿತಿಯಲ್ಲಿ ಸೇವೆಯನ್ನು ಒದಗಿಸಲಾಗುತ್ತಿದೆ. ಇದು ಪ್ರಮಾಣಾತ್ಮಕತೆಯಿಂದ ಗುಣಾತ್ಮಕತೆಯೆಡೆಗೆ ಹೆಚ್ಚಿನ ಒತ್ತು ನೀಡಿರುವುದನ್ನು ಸೂಚಿಸುತ್ತದೆ. ಆದ್ದರಿಂದ ಸರಕಾರಿ ಕಚೇರಿಗಳು ಸಾರ್ವಜನಿಕರಿಗೆ ವೇಗವಾಗಿ ಸ್ಪಂದಿಸುವುದರ ಜೊತೆಗೆ ಪ್ರಜಾಸ್ನೇಹಿಯಾಗಬೇಕಿದೆ. 

ಕರ್ನಾಟಕ ಸರಕಾರವು 2012 ರಲ್ಲಿ Indian Institute of Management, Bangalore ಸಂಸ್ಥೆಯಿಂದ ಅಧ್ಯಯನ ಮಾಡಿಸಿದ್ದು, ಈ ಅಧ್ಯಯನದ ವರದಿಯಲ್ಲಿ ವಾರದ ಐದು ದಿನಗಳ ಕಾರ್ಯನಿರ್ವಹಣೆಯಿಂದ ಈ ಕೆಳಕಂಡ ಪ್ರಯೋಜನಗಳನ್ನು ಪಟ್ಟಿ ಮಾಡಲಾಗಿದೆ.

1) ಒಂದು ನೇರವಾದ ಪ್ರಯೋಜನವೆಂದರೆ, ಸರಕಾರಿ ಕಚೇರಿಗಳು ವಾರದ ಐದು ದಿನ ಕಾರ್ಯನಿರ್ವಹಿಸುವುದರಿಂದ ವಿದ್ಯುತ್ ಶಕ್ತಿ, ಸಾರಿಗೆ ವೆಚ್ಚ, ನೀರಿನ ಬಿಲ್, ಇಂಧನ ವೆಚ್ಚದಲ್ಲಿ ಸುಮಾರು 100 ಕೋಟಿಗಳಷ್ಟು ಉಳಿತಾಯ ಮಾಡಬಹುದಾಗಿದೆ.

2) ವಾರದ ಆರು ದಿನಗಳ ಬದಲಾಗಿ ಸಾರ್ವಜನಿಕರು ಐದು ದಿನ ಮಾತ್ರ ಸರಕಾರಿ ಕಚೇರಿಗಳಿಗೆ ಭೇಟಿ ನೀಡುವುದರಿಂದ ನಾಗರೀಕ ಸಾರಿಗೆ ವಾಹನಗಳ ದಟ್ಟಣೆ/ಒತ್ತಡದಲ್ಲಿ ಗಣನೀಯ ಪ್ರಮಾಣದಲ್ಲಿ ಇಳಿಕೆಯಾಗುತ್ತದೆ. ಇದರಿಂದಾಗಿ ಇಂಧನ ಹಾಗೂ ಮಾನವ ಶಕ್ತಿಯ ಉಳಿತಾಯವಾಗುತ್ತದೆ.

3) ಕೇವಲ ಬೆಂಗಳೂರು ನಗರದಲ್ಲೇ ಸುಮಾರು 1 ಲಕ್ಷ ನೌಕರರು ಕಾರ್ಯನಿರ್ವಹಿಸುತ್ತಿದ್ದು, ರಸ್ತೆಗಳಲ್ಲಿ ವಾಹನ ದಟ್ಟನೇ ಹಾಗೂ ಪರಿಸರ ಮಾಲಿನ್ಯದಲ್ಲಿ ಗಣನೀಯ ಪ್ರಮಾಣದ ಇಳಿಕೆಯಾಗುತ್ತದೆ.

4) ಸರಕಾರಿ ರಜಾ ದಿನಗಳಲ್ಲಿ ಹಾಗೂ ನೌಕರರ ಸಾಂದರ್ಭಿಕ ರಜೆಗಳಲ್ಲಿ ಇಳಿಕೆ ಮಾಡುವುದರಿಂದ ಸರಕಾರಿ ಕಚೇರಿಗಳು ಈಗಿರುವಷ್ಟೇ ಗಂಟೆಗಳಿಗಿಂತ ಹೆಚ್ಚುವರಿ ಘಂಟೆಗಳ ಕಾಲ ಕಾರ್ಯನಿರ್ವಹಿಸಲಿದ್ದು, ವಾರದ ಮಧ್ಯ ಭಾಗದಲ್ಲಿ ಪಡೆಯುವ ರಜೆಗಳು ಕಡಿಮೆಯಾಗುತ್ತವೆ.

5) ಅದಕ್ಕನುಗುಣವಾಗಿ ಸರಕಾರಿ ನೌಕರರು ತಮ್ಮ ಕುಟುಂಬದೊಂದಿಗೆ ಹೆಚ್ಚಿನ ಗುಣಮಟ್ಟದ ಕಾಲವನ್ನು ವಿನಿಯೋಗಿಸಲು ಸಾಧ್ಯವಾಗುವುದು. ತಮ್ಮ ಮಕ್ಕಳ ಆಟ-ಪಾಠ ಹಾಗೂ ಇತರೆ ಚಟುವಟಿಕೆಗಳ ಕಡೆಗೆ ಗಮನ ಹರಿಸಬಹುದು.

6) ಸರಕಾರಿ ನೌಕರರಲ್ಲಿ ಶೇ. 30 ರಷ್ಟು ಮಹಿಳೆಯರಾಗಿದ್ದು, ಒಂದು ದಿನ ರಜೆ ಹೆಚ್ಚಾಗಿ ದೊರಕುವುದರಿಂದ ವರು ತಮ್ಮ ಗೃಹಕೃತ್ಯಗಳನ್ನು ಸಮರ್ಪಕವಾಗಿ ನಿರ್ವಹಿಸಲು ಸಹಕಾರಿಯಾಗುವುದು.

7) ಶಾಲಾ ಕಾಲೇಜುಗಳಲ್ಲಿ ವಾರದಲ್ಲಿ ಐದು ದಿನ ಕಾರ್ಯನಿರ್ವಹಿಸುವುದರಿಂದ ಒಂದು ದಿನ ಹೆಚ್ಚಿನ ರಜೆಯಿಂದಾಗಿ ಅಧ್ಯಾಪಕರಿಗೆ/ಶಿಕ್ಷಕರಿಗೆ ಸಾಪ್ತಾಹಿಕವಾಗಿ ತಮ್ಮ ಶೈಕ್ಷಣಿಕ ಕಾರ್ಯಕ್ರಮಗಳನ್ನು ರೂಪಿಸಲು ಅನುಕೂಲವಾಗುವುದು. ರಾಜ್ಯ ಸರಕಾರಿ ಕಾರ್ಯಪಡೆಯಲ್ಲಿ ಶಿಕ್ಷಕ ವೃಂದ ಶೇ. 40 ರಷ್ಟು ಇದ್ದು, ಸುಮಾರು 2.5 ಲಕ್ಷ ಶಿಕ್ಷಕರಿಗೆ ಇದರ ಲಾಭ ದೊರಕಲಿದೆ. ಸುಮಾರು ಐದು ದಶಲಕ್ಷಕ್ಕೂ ಮೀರಿದ ವಿದ್ಯಾರ್ಥಿಗಳಿಗೆ ಆಟ ಪಾಠಕ್ಕೆ ಹೆಚ್ಚಿನ ಸಮಯಾವಕಾಶ ದೊರೆಯಲಿದೆ. ಜೊತೆಗೆ ಸಾರ್ವಜನಿಕ ಸಂಚಾರ ವ್ಯವಸ್ಥೆಯ ಮೇಲಿನ ಒತ್ತಡ ಕಡಿಮೆಯಾಗುವುದು. ಖಾಸಗಿ ಶಾಲೆಗಳೂ ಸಹಾ ವಾರದಲ್ಲಿ ಐದು ದಿನಗಳ ಕಾರ್ಯನಿರ್ವಹಣಾ ವ್ಯವಸ್ಥೆಯನ್ನು ಪಾಲಿಸುವುದರಿಂದ ಉತ್ತಮವಾಗಿ ಕಾರ್ಯನಿರ್ವಹಿಸುತ್ತವೆ ಎಂಬುದು ಸಾರ್ವಜನಿಕರ ಅಭಿಪ್ರಾಯವಾಗಿದೆ.

8) ಸರಕಾರಿ ನೌಕರರಲ್ಲಿ ಶಿಸ್ತು ಸಮಯಪಾಲನೆ ಹಾಗೂ ಕರ್ತವ್ಯನಿಷ್ಠೆಯನ್ನೊಳಗೊಂಡಂತೆ ಉತ್ತಮ ಕಾರ್ಯ ಸಂಸ್ಕೃತಿಯನ್ನು ಅಳವಡಿಸಲು ಸೂಕ್ತ ಕ್ರಮ ಕೈಗೊಂಡಲ್ಲಿ, ಸೇವೆಯ ಗುಣಮಟ್ಟ ಮತ್ತು ಕಾರ್ಯದಕ್ಷತೆ ಉತ್ತಮಗೊಳ್ಳುವುದು. ಇದರ ಜೊತೆಗೆ ಕೇಂದ್ರ ಸರಕಾರ ಹಾಗೂ ಇತರೆ ರಾಜ್ಯಗಳ ಮಾದರಿಯನ್ನೇ ಅನುಸರಿಸಿದಂತಾಗುವುದು. ಸರಕಾರಿ ನೌಕರರು ತಮ್ಮ ಖಾಸಗೀ ಕಾರ್ಯಕ್ರಮಗಳನ್ನು ಈ ರಜಾ ಅವಧಿಗಳಲ್ಲಿ ನಿರ್ವಹಿಸಿಕೊಳ್ಳಬಹುದು. ಸಮಾಜದೊಂದಿಗೆ ಉತ್ತಮ ಬಾಂಧವ್ಯವನ್ನು ಹೊಂದಬಹುದು. ನೌಕರರು ತಮ್ಮ ಆರೋಗ್ಯದ ಬಗ್ಗೆ, ಕುಟುಂಬದ ಸದಸ್ಯರ ಬಗ್ಗೆ ಕಾಳಜಿ ವಹಿಸಲು ಇದು ಸಹಕಾರಿಯಾಗುತ್ತದೆ.

Negetive Points.
ವಾರದಲ್ಲಿ ಐದು ದಿನಗಳ ಕಚೇರಿ ಕಾರ್ಯನಿರ್ವಹಣೆ ವ್ಯವಸ್ಥೆಯನ್ನು ಜಾರಿಗೊಳಿಸುವಲ್ಲಿರುವ ಋಣಾತ್ಮಕ ಪರಿಣಾಮಗಳನ್ನು ಸಮರ್ಥವಾಗಿ ನಿರ್ವಹಿಸಲು ಈ ಕೆಳಕಂಡ ಕ್ರಮಗಳನ್ನು ಕೈಗೊಳ್ಳುವುದು ಅವಶ್ಯಕವಾಗಿದೆ.
1)      ಸಾರ್ವತ್ರಿಕ ರಜಾ ದಿನಗಳನ್ನು ಪ್ರಸ್ತುತ ವಾರ್ಷಿಕ 22 ದಿನಗಳಿಂದ 15 ದಿನಗಳಿಗೆ ಇಳಿಸುವುದು (ಹಬ್ಬ ಹರಿದಿನ, ಜಯಂತಿ, ಪುಣ್ಯತಿಥಿ ಇತ್ಯಾದಿ). ಸಾಂಧರ್ಭಿಕ ರಜೆಗಳನ್ನು 15 ರಿಂದ 10 ದಿನಗಳಿಗೆ ಇಳಿಸುವುದು.
2)     ಪರಿಮಿತ ರಜೆಗಳನ್ನು ಪ್ರಸ್ತುತ 14 ದಿನಗಳಿಂದ 38 ದಿನಗಳಿಗೆ ಹೆಚ್ಚಿಸುವುದು ಮತ್ತು ಒಬ್ಬ ನೌಕರನಿಗೆ ಯಾವುದಾದರೂ 02 ಪರಿಮಿತ ರಜೆಗಳನ್ನು ಬಳಸಲು ಅನುಮತಿ ನೀಡುವುದು. (ಅಂದರೆ, ಹೋಳಿ, ಗೌರಿ ಹಬ್ಬಕ್ಕೆ ಸರಕಾರಿ ರಜೆ ಇರುವುದಿಲ್ಲ. ಈ ತರಹದ ಹಬ್ಬಗಳಿಗೆ ವರ್ಷದಲ್ಲಿ 02 ದಿನ ರಜೆ ಪಡೆಯಲು ಅವಕಾಶ ನೀಡುವುದು)
3)      ಪ್ರತಿ ದಿನದ ಕಾರ್ಯಾವಧಿಯನ್ನು ಪ್ರಸ್ತುತ 06 ಗಂಟೆ 45 ನಿಮಿಷಗಳಿಂದ 08 ಘಂಟೆಗಳಿಗೆ ಹೆಚ್ಚಿಸುವುದು. ಅಂದರೆ, ಅಪರಾಹ್ನ 30 ನಿಮಿಷಗಳ ವಿರಾಮದೊಂದಿಗೆ ಬೆಳಿಗ್ಗೆ 09.30 ರಿಂದ ಸಂಜೆ 06 ರವರೆಗೆ ಕರ್ತವ್ಯ ನಿರ್ವಹಣೆ ಮಾಡುವುದು.
4)     ಹಾಜರಾತಿ ಮತ್ತು ಸಮಯಪಾಲನೆಯನ್ನು ಕಟ್ಟುನಿಟ್ಟಿನಿಂದ ನಿರ್ವಹಿಸಬೇಕಾಗುತ್ತದೆ. ಏಕೆಂದರೆ, ಈ ವಿಷಯವೇ ಸಂಪೂರ್ಣವಾಗಿ ವ್ಯವಸ್ಥೆಯನ್ನು ಯಶಸ್ವಿ ಅಥವಾ ವಿಫಲಗೊಳಿಸಬಹುದು. ಬಯೋಮೆಟ್ರಿಕ್ ಹಾಜರಾತಿ, ಕಚೇರಿಗಳಿಗೆ ಅನಿರೀಕ್ಷಿತ ಭೇಟಿ ನೀಡುವುದು, ನಿರಂತರ ತಪಾಸಣೆ, ಮೌಲ್ಯಮಾಪನ ವ್ಯವಸ್ಥೆಯ ಮೂಲಕ ಶಿಸ್ತನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸಿ, ಸಾರ್ವಜನಿಕರ ಕುಂದುಕೊರತೆಯನ್ನು ನಿವಾರಿಸಬಹುದು.
5)      ಪೋಲೀಸ್, ಅಗ್ನಿಶಾಮಕದಳ, ಆರೋಗ್ಯ, ನೀರು ಮತ್ತು ವಿದ್ಯುತ್ ಸರಬರಾಜುಗಳಂತಹ ಅಗತ್ಯ ಸೇವೆಗಳ ಇಲಾಖೆ ಮತ್ತು ಸಂಸ್ಥೆಗಳಿಗೆ ರಜಾ ಪರಿಹಾರ ಭತ್ಯೆಗಳು ಹಾಗೂ ಉತ್ತಮ ಸೇವೆ ಸಲ್ಲಿಸುವಲ್ಲಿ ಅವಶ್ಯಕವಾದ ತಾಂತ್ರಿಕತೆಯಲ್ಲಿ ಅಭಿವೃದ್ಧಿ ಅಗತ್ಯವಿರುವ ನೌಕರರ ಸಂಖ್ಯೆಯನ್ನು ಹೆಚ್ಚಿಸುವುದು. ಇಂತಹ ಸಂಸ್ಥೆಗಳಲ್ಲಿ , ಪಾಳಿ ಪ್ರಕಾರ ನೌಕರರ ಕಾರ್ಯನಿರ್ವಹಣೆಯನ್ನು ಬದಲಾಯಿಸಿ, ಅವರಿಗೂ ಸಹ ವಾರದಲ್ಲಿ ಎರಡು ದಿನ ರಜೆ ನೀಡುವಂತೆ ಕ್ರಮ ಕೈಗೊಳ್ಳುವುದು.
6)     ಸರಕಾರದ ಎಲ್ಲಾ ಹಂತಗಳಲ್ಲಿಯೂ ನಾಗರೀಕ ಸೇವಾ ಪೂರೈಕೆಯ ವ್ಯವಸ್ಥೆಯನ್ನು ಸಂಪೂರ್ಣವಾಗಿ ಪುನರ್ ರಚಿಸುವ ಅವಶ್ಯಕತೆ ಇದೆ. ಇದನ್ನು ಆಡಳಿತದಲ್ಲಿ ಅಗತ್ಯ ತಾಂತ್ರಿಕತೆಯ ಅಳವಡಿಕೆ, ಮಾಹಿತಿ ತಂತ್ರಜ್ಞಾನದ ಉತ್ತಮ ಬಳಕೆಯಿಂದ ಹೆಚ್ಚಾಗಿರುವ ನೌಕರರನ್ನು ಗುರುತಿಸಿ, ನಾಗರೀಕ ಸಂಪರ್ಕವಿರುವ ಕಡೆ ಅಗತ್ಯತೆಗನುಗುಣವಾಗಿ ಮರು ಹಂಚಿಕೆ ಮಾಡುವುದು.
7)      ಸರಕಾರಿ ನೌಕರರ ತಾಂತ್ರಿಕ ಹಾಗೂ ನಿರ್ವಹಣಾ ಕೌಶಲ್ಯವನ್ನು ಹೆಚ್ಚಿಸುವ ತರಬೇತಿ ನೀಡುವುದು ಮತ್ತು ನಾಗರೀಕರಿಗೆ ಜವಾಬ್ದಾರಿಯುತ ಸೇವೆಯನ್ನು ಸಲ್ಲಿಸುವ ಬಗ್ಗೆ ಅರಿವು ಮೂಡಿಸುವುದು ಅವಶ್ಯಕವಾಗಿದೆ.

ಈ ಹಿನ್ನಲೆಯಲ್ಲಿ ಸರಕಾರಿ ನೌಕರರಿಗೆ ವಾರದಲ್ಲಿ ಆರು ದಿನಗಳ ಬದಲಾಗಿ ಐದು ದಿನಗಳ ಕಾರ್ಯನಿರ್ವಹಣೆಯನ್ನು ಜಾರಿಗೆ ತಂದರೆ, ಉತ್ತಮ ಫಲಿತಾಂಶವನ್ನು ನಾವು ಕಾಣಬಹುದಾಗಿದೆ. ಈ ವರದಿಯು ಸರಕಾರದಿಂದ ಅಂಗೀಕೃತವಾಗಿಲ್ಲ. ಸರಕಾರಿ ನೌಕರರ ಸಂಘದವರೇ ಇದಕ್ಕೆ ವಿರೋಧ ಮಾಡಿ, ಹಿಂದಿನ ಸರಕಾರಕ್ಕೆ ಮನವಿಯನ್ನು ಸಲ್ಲಿಸಿದ್ದಾರೆಂದು ತಿಳಿದು ಬಂದಿದೆ. ಈ ಕಾರಣದಿಂದಾಗಿಯೇ ಇದು ಜಾರಿಯಾಗಿಲ್ಲವೆಂಬುದು ವಾಸ್ತವ. ಸಾಮಾನ್ಯವಾಗಿ ಸಾರ್ವಜನಿಕರಿಗೆ, ಬುದ್ಧಿಜೀವಿಗಳಿಗೆ, ವಿದ್ಯಾವಂತರಿಗೆ (ಸರಕಾರಿ ನೌಕರರನ್ನು ಹೊರತುಪಡಿಸಿ), ಸರಕಾರಿ ನೌಕರರೆಂದರೆ, ಕೆಲಸ ಮಾಡುವುದಿಲ್ಲವೆಂಬ ಪೂರ್ವಾಗ್ರಹ ಪೀಡಿತ ಅಭಿಪ್ರಾಯವನ್ನು ಹೊಂದಿದ್ದಾರೆ. ಆದರೆ, ಸರಕಾರಿ ನೌಕರಿಯಲ್ಲಿರುವವರಿಗೆ ಮಾತ್ರ ಇಲ್ಲಿನ ಒತ್ತಡ, ಕಾರ್ಯನಿರ್ವಹಣೆಯ ಬಗ್ಗೆ ಅರಿವು ಇರುತ್ತದೆ. ವಿಧಾನಸೌಧ ವನ್ನು ನಿಧಾನಸೌಧ ಎಂದು ಅಣಕಿಸುವವರು ಒಮ್ಮೆಯಾದರೂ ವಿಧಾನಸೌಧದ ಕಚೇರಿಗೆ ಬಂದು, ಸರಕಾರಿ ನೌಕರರು ಸುಮ್ಮನೆ ಕೂತು ನಿದ್ದೆ ಮಾಡುತ್ತಿದ್ದಾರೆಯೇ ಅಥವಾ ಕೆಲಸ ಮಾಡುತ್ತಿದ್ದಾರೆಯೇ ? ಎಂಬ ಬಗ್ಗೆ ಗಮನಹರಿಸುವುದು ಒಳಿತು. ಸರಕಾರಿ ನೌಕರರೆಂದರೆ, ನಾವೂ ಕೂಡಾ ಸಾಮಾನ್ಯ ಮನುಷ್ಯರೇ ಸ್ವಾಮಿ... ನಾವೇನು ಮೇಲಿಂದ ಇಳಿದು ಬಂದವರಲ್ಲ. ನಮಗೂ ಸಹ ಎಲ್ಲರಂತೆಯೇ ಸಾಮಾಜಿಕ ನ್ಯಾಯ ಬೇಕು ಎನ್ನುವವರು. ಇನ್ನು ನಮಗೆ ಸಿಗುವ ಸೌಲಭ್ಯಗಳೋ.. ಆ ದೇವರಿಗೇ ಪ್ರೀತಿ..  ಅದರ ಬಗ್ಗೆ ಇನ್ನೊಂದು ಲೇಖನದಲ್ಲಿ ಬರೆಯುವೆ. ನಿಮ್ಮ ಅಭಿಪ್ರಾಯಗಳಿಗೆ ಮುಕ್ತ ಸ್ವಾಗತ.


ಇಂತಿ ನಿಮ್ಮ ಪ್ರೀತಿಯ,


ಶಿವಶಂಕರ ವಿಷ್ಣು ಯಳವತ್ತಿ

11 August 2012

ಬಹಳ ದಿನಗಳ ನಂತರ ಒಂದಿಷ್ಟು ಟ್ವೀಟುಗಳು

1) ಯಳವತ್ತಿ ಟ್ವೀಟ್:- ಓ ದೇವರೇ, ನನಗೆ ತುಂಬಾನೆ ದುಃಖವನ್ನು ನೀಡು.. ನೀನೆಷ್ಟೇ ಕಷ್ಟ ಕೊಟ್ಟರೂ, ನನಗೆ ಚಿಂತೆಯಿಲ್ಲ.. ಆದರೆ ಸುಖವನ್ನು ಮಾತ್ರ ಕೊಟ್ಟೀಯ ಜೋಕೆ.. ಯಾಕೆಂದರೆ, ನಾನೀಗ ದುಃಖವನ್ನು ಪ್ರೀತಿಸೋಕೆ ಶುರು ಮಾಡಿದ್ದೇನೆ.. ಅದನ್ನೂ ಸಹ ನನ್ನಿಂದ ಕಿತ್ತುಕೊಬೇಡ..

2) ಯಳವತ್ತಿ ಟ್ವೀಟ್:-
ಮೌನಕ್ಕೆ ಸಾವಿರ ಅರ್ಥವಂತೆ..
ಪ್ರೀತಿಯ ವಿಷಯಕ್ಕೆ ಬಂದಾಗ ನಿನ್ನೀ ಮೌನದಲ್ಲಿ ನನಗೆ ಬೇಕಾದ ಅರ್ಥವನ್ನು ಇನ್ನೂ ಹುಡುಕುತ್ತಲೇ ಇದ್ದೇನೆ..

3) ಯಳವತ್ತಿ ಟ್ವೀಟ್:- ನೀ ದೂರವಾದಾಗ ಜೋರಾಗಿ ಅತ್ತುಬಿಡಬೇಕೆಂದು ಅನಿಸಿತ್ತು.. ಆದರೆ, ನನ್ನ ಕಣ್ಣಾಲಿಗಳಲ್ಲಿನ ನಿನ್ನ ಚಿತ್ರ ಕಣ್ಣೀರಿನಲ್ಲಿ ಕರಗಿ ಹೋದೀತೆಂದು ಭಯವಾಯಿತು.

4) ಯಳವತ್ತಿ ಟ್ವೀಟ್:- ಒಮ್ಮೆಯಾದರೂ ಇಲ್ಲಿ ನೋಡೆಯಾ?? ಈ ನನ್ನ ಫೇಸ್ ಬುಕ್ ಸ್ಟೇಟಸ್ ಮೆಸೇಜ್ ನಲ್ಲಿ ನಿನ್ನ ನೆನಪುಗಳಿಲ್ಲವೆಂದು ನಿನಗೆ ಸಾರಿ ಸಾರಿ ಹೇಳಬೇಕಿದೆ..

5) ಯಳವತ್ತಿ ಟ್ವೀಟ್:-
ಕಾಲವನ್ನು ಹಿಂದಕ್ಕೋಡಿಸುವ ಶಕ್ತಿ ಭಗವಂತನಿಗೆ ಮಾತ್ರ ಗೊತ್ತೆಂದು ತಪ್ಪು ತಿಳಿದಿದ್ದೆ.
ನಿನ್ನ ಚಿತ್ರವನ್ನು ನೋಡಿದೊಡನೆ,
ನಾ ನಿನ್ನ ಜೊತೆಗೆ ಕಳೆದ ಕ್ಷಣಗಳ ನೆನಪುಗಳ ಕಡೆಗೆ ಮನಸ್ಸು ನಿಲ್ಲದೇ ಓಡಿಬಿಡುತ್ತೆ..

Poor fellow ಮನಸ್ಸು


6) ಯಳವತ್ತಿ ಟ್ವೀಟ್:-

ಒಂದೆರಡು ಅಕ್ಷರಗಳನ್ನು
ಕ್ರಮವಿಲ್ಲದೇ ಜೋಡಿಸಿ
ಸೇರಿಸಿ
ಬರೆದೆ.. ಕವನವೆಂದರು..

ಮತ್ತೆ
ಸಾಲಾಗಿ ಕ್ರಮವಾಗಿ
ಕೂಡಿಸಿ ಬರೆದೆ
ಕಥೆಯೆಂದರು..

ನಿನ್ನ ಹಿಂದೆ
ಸಾಲಾಗಿ, ನೆರಳಾಗಿ
ಜೋಡಿಯಾಗಿ ಬರುವೆನೆಂದೆ
ಛೇ....!!!
ನೀನು ಒಲ್ಲೆಯೆಂದೆ................


7)
ಯಳವತ್ತಿ ಚಿತ್ರ ಟ್ವೀಟ್:-

ನೀ ನನ್ನ ಕರೆಗೆ ಓಗೊಡುವುದಿಲ್ಲವೆಂದು ಗೊತ್ತಿದ್ದರೂ ನನ್ನ ಪ್ರಯತ್ನವನ್ನು ಬಿಡಲಾರೆ ಹುಡುಗೀ.. ನಿನ್ನ ಮನಸ್ಸಿಗಿಂತಲೂ ನಿನ್ನ ಕೈಬೆರಳುಗಳ ಮೇಲೆ ನನಗೆ ನಂಬಿಕೆ ಜಾಸ್ತಿ, ಅಕಸ್ಮಾತಾಗಿಯಾದರೂ ನಿನ್ನ ಮೊಬೈಲಿನ Answer ಕೀಯನ್ನು ಒಮ್ಮೆಯಾದರೂ ಒತ್ತುತ್ತವೆಂದು..

8) ನನ್ನ ಮನದಾಳದ ಟ್ವೀಟ್:- ನಾನು ಸತ್ತ ಮೇಲೂ ನನ್ನವರು ನನ್ನ ದ್ವೇಷಿಸಬೇಕು. ಯಾಕೆಂದರೆ, ನನ್ನವರು ನನಗಾಗಿ ಅಳುವುದು ನನಗೆ ಇಷ್ಟವಿಲ್ಲ..