ಖಾಯಂ ಓದುಗರು..(ನೀವೂ ಸೇರಬಹುದು)

08 January 2015

ಅಷ್ಟಕ್ಕೂ ನಮ್ಮ ರೈತರಿಗೆ ಬೇಕಾಗಿರುವುದು ಏನು??


(ಲೇಖನ ಬರೆಯುವ ಮೊದಲೇ ನಾನು ಹೇಳಿಬಿಡುತ್ತೇನೆ.. ನಾನು ಯಾವುದೇ ಪಕ್ಷದವನಲ್ಲ.. ನಾನೊಬ್ಬ ದೇಶಾಭಿಮಾನಿ ಎಂದು ಹೇಳಲಷ್ಟೇ ಸಾಧ್ಯ.. )
ಪ್ರತಿ ಚುನಾವಣೆಯಲ್ಲಿ ಎಲ್ಲ ರಾಜಕೀಯ ಪಕ್ಷಗಳು ರೈತರನ್ನೇ ಪ್ರಮುಖ ವೋಟ್ ಬ್ಯಾಂಕ್ ಎಂದು ಗುರಿಯಿರಿಸಿಕೊಂಡು ಹಲವಾರು ಆಶ್ವಾಸನೆಗಳನ್ನು ಕೊಡುತ್ತವೆ. ಅತಿ ಕಡಿಮೆ ದರದಲ್ಲಿ ಸಾಲ, ಹಿಂದಿನ ಸಾಲ ಮನ್ನಾ ಘೋಷಣೆ, ಕಡಿಮೆ ದರದಲ್ಲಿ ರಾಸಾಯನಿಕ ಗೊಬ್ಬರ, 24 ತಾಸು ವಿದ್ಯುತ್..ಇತ್ಯಾದಿ ಇತ್ಯಾದಿ.
ಹಲವು ಪಕ್ಷಗಳು ತಮಗೆ ಮತ ನೀಡಿದ ರೈತ ಬಂಧುಗಳಿಗೆ ಈ ಕೊಡುಗೆಗಳನ್ನು ಕೊಟ್ಟಿದ್ದು ಕೂಡಾ ವಾಸ್ತವ. ಯಾವುದೇ ಬಜೆಟ್ ಮಂಡಿಸುವಾಗಲೂ ಸಹ ಸರಕಾರವು ರೈತರಿಗೆ ಹಲವಾರು ಕೊಡುಗೆಗಳನ್ನು ಪ್ರಕಟಿಸಿ ಅವರನ್ನು ಮೇಲೆತ್ತಲು ಪ್ರಯತ್ನಿಸುತ್ತಿದೆ. ಹಿಂದಿನ ಮುಖ್ಯ ಮಂತ್ರಿಯಾಗಿದ್ದ ಬಿ.ಎಸ್. ಯಡಿಯೂರಪ್ಪನವರಂತೂ ಒಂದು ಹೆಜ್ಜೆ ಮುಂದು ಹೋಗಿ ಕೃಷಿ ಬಜೆಟ್ ನ್ನು ಮಂಡಿಸಿದರು. ಈಗಿನ ಮಾನ್ಯ ಮುಖ್ಯಮಂತ್ರಿಗಳಾದ ಸಿದ್ಧರಾಮಯ್ಯರವರು ರೈತರ ಸಾಲ ಮನ್ನಾ ಮಾಡಿ ಪುನಃ ಶೇ 0 ರಷ್ಟು ದರದಲ್ಲಿ ಸಾಲವನ್ನು ವಿತರಿಸುವ ಕೈಂಕರ್ಯ ಕೈಗೊಂಡಿದ್ದಾರೆ.
ಆದರೆ, ನಮ್ಮ ಮುಂದೆ ಇರುವ ಪ್ರಶ್ನೆ ಏನೆಂದರೆ, ಇಷ್ಟೆಲ್ಲಾ ಅನುಕೂಲ ಮಾಡಿಕೊಟ್ಟರೂ ಕೂಡಾ ನಮ್ಮ ರೈತರುಗಳ ಬವಣೆ ತಪ್ಪಿಲ್ಲ. ಮತ್ತದೇ ರಸ್ತೆ ತಡೆಗಳು, ಪ್ರತಿಭಟನೆಗಳು, ಬೆಂಬಲ ಬೆಲೆಗಾಗಿ ಹೋರಾಟ ಇತ್ಯಾದಿಗಳನ್ನು ನೋಡುತ್ತಾ ಕೇಳುತ್ತಾ ಇರುತ್ತೇವೆ. ಇದೆಲ್ಲಾ ಹೀಗ್ಯಾಕೆ???
ಇಷ್ಟೆಲ್ಲಾ ಸಮಸ್ಯೆಗಳ ಮೂಲವನ್ನು ನಾವು ಹುಡುಕಿ ತೆಗೆದು ಅದನ್ನು ನಿವಾರಿಸುವ ಪ್ರಯತ್ನ ಖಂಡಿತಾ ಮಾಡಬೇಕಿದೆ.
ಈ ಹಿಂದೆ ರಾಜಕಾರಣಿಯೊಬ್ಬರು (ಅವರ್ಯಾರೆಂದು ಹೇಳಲು ಸಾಧ್ಯವಿಲ್ಲ.. ಹೇಳಿದರೆ, ಒಂದು ಪಕ್ಷದ ಪರವಾಗಿರುವವನು ಎಂಬ ಬಿರುದು ಬಾವಲಿಗಳು ಸುಲಭವಾಗಿ ಸಿಗುವ ಭಯವಿದೆ) ತಾವು ಮುಖ್ಯ ಮಂತ್ರಿಯಾಗಿ ಪದಗ್ರಹಣಗೊಂಡ ಕೆಲವು ದಿನಗಳ ನಂತರ ರೈತ ಮುಖಂಡರುಗಳು ಕೃಷಿ ಕೆಲಸಕ್ಕಾಗಿ ತಮಗೆ ದಿನಕ್ಕೆ 5(?) ತಾಸು ಎರಡು ಫೇಸ್ ವಿದ್ಯುತ್ ನೀಡಬೇಕೆಂದು ಮನವಿ ಸಲ್ಲಿಸಿದರು. ರೈತರು ಶೇ. 90 ರಷ್ಟು ವಿದ್ಯುತ್ತನ್ನು ಕೊಳವೆ ಬಾವಿಗಳ ಮೂಲಕ ಅಂತರ್ಜಲ ನೀರನ್ನು ಮೇಲಕ್ಕೆತ್ತಿ ಬೆಳೆಗಳಿಗೆ ನೀರನ್ನು ಹಾಯಿಸಲು ಉಪಯೋಗಿಸುತ್ತಿದ್ದರು. 
ಅವರ ಮನವಿಯನ್ನು ಪರಿಶೀಲಿಸಿದ ಮುಖ್ಯ ಮಂತ್ರಿಗಳು ಇದು ಸಾಧ್ಯವಿಲ್ಲ ಎಂದುಬಿಟ್ಟರು. ವಿಚಲಿತರಾದ ರೈತ ಮುಖಂಡರುಗಳು, ವಿದ್ಯುತ್ ಇಲ್ಲದಿದ್ದರೆ ನೀರಿಲ್ಲ. ನೀರಿಲ್ಲದಿದ್ದರೆ ಬೆಳೆಯಿಲ್ಲ. ಬೆಳೆಯಿಲ್ಲದಿದ್ದರೆ ನಾವು ಬದುಕುವುದು ಹೇಗೆ ಎಂದು ಕೇಳಿದರು. ಆಗ ಮುಖ್ಯಮಂತ್ರಿಗಳು ಹೇಳಿದರು, ನಿಮಗೆ ಬೇಕಾಗಿರುವುದು ನೀರು.. ನೀರು ಕೇಳಿ ಕೊಡಲು ಪ್ರಯತ್ನಿಸುವೆ, ಆದರೆ ವಿದ್ಯುತ್ ಮಾತ್ರ ಸಾಧ್ಯವಿಲ್ಲ ಎಂದು ಖಡಾಖಂಡಿತವಾಗಿ ಹೇಳಿಬಿಟ್ಟರು.
ಸಿಟ್ಟುಗೊಂಡ ರೈತಮುಖಂಡರುಗಳು ಆ ಮುಖ್ಯ ಮಂತ್ರಿಗಳ ವಿರುದ್ಧ ರಾಜ್ಯಾದ್ಯಂತ ಪ್ರತಿಭಟನೆಗಳನ್ನು ಕೈಗೊಂಡರು. ಪ್ರತಿಕೃತಿಗಳನ್ನು ಸುಟ್ಟರು. ಆದರೂ ಮುಖ್ಯಮಂತ್ರಿಗಳು ತಮ್ಮ ನಿಲುವನ್ನು ಸಡಿಲಗೊಳಿಸಲಿಲ್ಲ. ರೈತರು ಎಷ್ಟು ದಿನ ಪ್ರತಿಭಟನೆ ಮಾಡಿಯಾರು...?? ಕೊನೆಗೆ ಒಂದು ದಿನ ಪುನಃ ಮುಖ್ಯ ಮಂತ್ರಿಗಳನ್ನು ಭೇಟಿಯಾಗಿ, ತಮಗೆ ನೀರು ಕೊಡಲು ಕೇಳಿದರು..
ಅಷ್ಟರಲ್ಲಾಗಲೇ ಮುಖ್ಯಮಂತ್ರಿಗಳು ಇವರ ಆಗಮನವನ್ನೇ ನಿರೀಕ್ಷಿಸುತ್ತಾ ಕೂತಿದ್ದರು. ರೈತರ ಮಾತುಗಳನ್ನು ಕೇಳಿ ಸಂತೋಷಗೊಂಡ ಅವರು ನಾನು ನಿಮಗೆ ನೀರು ಕೊಡಬಲ್ಲೆ. ಅದಕ್ಕೆ ರೂಪು ರೇಷೆಗಳು ಸಿದ್ಧವಾಗಿದೆ. ತಮ್ಮೆಲ್ಲರಿಂದ ಒಂದು ಸಹಾಯವಾಗಬೇಕು ಎಂದು ಕೇಳಿದರು.. ಅದೇನೆಂದರೆ, ಅವರು ತಯಾರಿಸಿದ ಯೋಜನೆಯು ಎರಡು ನದಿಗಳನ್ನು ಸೇರಿಸಿ, ಕಾಲುವೆಗಳ ಮೂಲಕ ನೀರು ಹರಿಸುವುದಾಗಿತ್ತು. ಅದಕ್ಕೆ ಕಾಲುವೆಗಳನ್ನು ನಿರ್ಮಿಸಲು ಭೂಮಿಯ ಅವಶ್ಯಕತೆ ಇದ್ದು, ಭೂ ಸ್ವಾಧೀನಕ್ಕೊಳಪಡಿಸಬೇಕಾಗಿತ್ತು. ರೈತರು ತಾವೇ ಮುಂದು ಬಂದು ಜಮೀನನ್ನು ನೀಡಿದಲ್ಲಿ, ಜಮೀನಿಗೆ ಮಾರುಕಟ್ಟೆ ಮೌಲ್ಯದಷ್ಟು ಮತ್ತು ಒಪ್ಪಿಗೆ ಆಧಾರದ ಮೇಲೆ ಪರಿಹಾರವನ್ನು ನೀಡುವುದಾಗಿ, ನಂತರ ನ್ಯಾಯಾಲಯಕ್ಕೆ ಹೋಗಬಾರದಾಗಿ ವಿನಂತಿಸಿದರು. ಇದಕ್ಕೆ ರೈತರುಗಳು ಸಹ ಸಂತೋಷದಿಂದ ಒಪ್ಪಿಗೆ ನೀಡಿದರು. ನಂತರ ಜರುಗಿದ್ದು ಇತಿಹಾಸ. ಅತಿ ವೇಗವಾಗಿ ಕಾಲುವೆಗಳು ಯಾವುದೇ ಭೂಸ್ವಾಧೀನದ ತಲೆ ನೋವಿಲ್ಲದೇ ನಿರ್ಮಾಣಗೊಂಡು, ರೈತರು ದಿನದ 24 ತಾಸು ಕೃಷಿ ಭೂಮಿಗೆ ನೀರನ್ನು ವಿದ್ಯುತ್ ಸಹಾಯವಿಲ್ಲದೇ ಪಡೆಯುತ್ತಿದ್ದಾರೆ. ಅಷ್ಟೇ ಅಲ್ಲ. ವಿದ್ಯುತ್ ನ್ನು ಕೂಡಾ 24 ತಾಸು 3 ಫೇಸ್ ಗಳಲ್ಲಿ ಪಡೆಯುತ್ತಿದ್ದಾರೆ.
ನಾನು ಈ ಉದಾಹರಣೆ ನೀಡಲು ಕಾರಣವೇನೆಂದರೆ, ಎಲ್ಲರೂ ಸಮಸ್ಯೆಯನ್ನು ಬಗೆಹರಿಸಲು ಉತ್ಸುಕತೆ ತೋರುತ್ತಾರೆ ವಿನಃ ಸಮಸ್ಯೆಯ ಮೂಲವನ್ನು ಶೋಧಿಸುವುದರಲ್ಲಿ ವಿಫಲರಾಗುತ್ತಿದ್ದಾರೆ. ಸಮಸ್ಯೆಯನ್ನು ಬಗೆಹರಿಸಿದರೆ ಅದು ಕೇವಲ ತಾತ್ಕಾಲಿಕವಾಗುತ್ತದೆಯೇ ಹೊರತು ಶಾಶ್ವತ ಪರಿಹಾರವಾಗುವುದಿಲ್ಲ. ಇದನ್ನಷ್ಟೇ ನಾನು ಹೇಳ ಹೊರಟಿದ್ದು..
ಸಂಬಂಧಿಸಿದವರು ಈ ಬಗ್ಗೆ ತಮ್ಮ ಗಮನವನ್ನು ಹರಿಸಿ ಸೂಕ್ತ ಕ್ರಮ ಕೈಗೊಳ್ಳಲು ವಿನಂತಿ.