ಖಾಯಂ ಓದುಗರು..(ನೀವೂ ಸೇರಬಹುದು)

31 July 2014

ಫೇಸ್ ಬುಕ್ಕು, ಬ್ಲಾಗಿಗರು, ಧರ್ಮಾಂಧತೆ ಮತ್ತು ಕಿತ್ತಾಟ..

ಫೇಸ್ ಬುಕ್ಕು, ಬ್ಲಾಗಿಗರು, ಧರ್ಮಾಂಧತೆ ಮತ್ತು ಕಿತ್ತಾಟ..

ನಾನು ಈ ಪೋಸ್ಟ್ ಬರೆಯುವ ಮುಂಚೆಯೇ ಹೇಳಿಬಿಡುತ್ತೇನೆ. ನಾನು ಕೋಮುವಾದಿಯೂ ಅಲ್ಲ, ಎಡ-ಬಲ ಪಂಥೀಯನೂ ಅಲ್ಲ. ನನ್ನ ಭಾರತ ದೇಶವನ್ನು ಸಾಯುವಷ್ಟು ಪ್ರೀತಿಸುವ ಹುಚ್ಚು ದೇಶಾಭಿಮಾನಿ..

ಛೇ..!! ಕಳೆದ ಹಲವು ದಿನಗಳಿಂದ ಫೇಸ್ ಬುಕ್ ನಲ್ಲಿ ನಡೆಯುತ್ತಿರುವ ಚರ್ಚೆ ನೋಡಿ ಅಸಹ್ಯವಾಗಿದೆ. Prakash Hegde (ಪ್ರಕಾಶಣ್ಣ) ಹೇಳಿದಂತೆ ಫೇಸ್ ಬುಕ್ ಬಳಕೆದಾರರಲ್ಲಿ ಮತ್ತು ವಿಶೇಷವಾಗಿ ಬ್ಲಾಗಿಗರಲ್ಲಿ ಎಡಪಂಥೀಯ, ಬಲಪಂಥೀಯ ಎಂಬ ಗುಂಪುಗಳಾಗಿ ಒಡೆದು ಹೋಗಿವೆ. ಇನ್ನೂ ಕೆಲವರು ತಟಸ್ಥವಾಗಿ ತಮಗೇ ಏನೂ ಗೊತ್ತಿಲ್ಲವೆಂಬಂತೆ ತಮ್ಮ ಪಾಡಿಗೆ ತಾವು ಇದ್ದುಬಿಟ್ಟಿದ್ದಾರೆ.

ಇಷ್ಟಕ್ಕೂ ಇದು ಶುರುವಾದದ್ದು ಲೋಕಸಭಾ ಚುನಾವಣೆಗಳ ಪೂರ್ವದಿಂದಲೇ ಎಂದು ಹೇಳಬಹುದು. ಅದಕ್ಕೂ ಮುಂಚೆ ಸಣ್ಣದಾಗಿ ಇದ್ದರೂ ಭುಗಿಲೆದ್ದಿದ್ದು ಚುನಾವಣೆಯಲ್ಲಿ ನರೇಂದ್ರ ಮೋದಿಯನ್ನು ಬೆಂಬಲಿಸಬೇಕೋ ಬೇಡವೋ ಎಂಬ ಪ್ರಶ್ನೆಯ ಮೂಲಕ. ಹಲವು ಯುವ ಜನಾಂಗದವರು ಶ್ರೀ ನರೇಂದ್ರಮೋದಿಯವರ ಮಾತುಗಳಿಗೆ, ಆತನ ದೂರ ದೃಷ್ಟಿ ಮತ್ತು ಅಭಿವೃದ್ಧಿ ಕಾರ್ಯಗಳಿಗೆ ಮನಸೋತು ಆತನ ಅಭಿಮಾನಿಯಾಗಿದ್ದುದರಲ್ಲಿ ಆಶ್ಚರ್ಯವಿಲ್ಲ. ಇಡೀ ದೇಶದ ಮಾಧ್ಯಮಗಳೇ ಆತನ ವಿರುದ್ಧ ನಿಂತರೂ ಆತನ ಮೇಲೆ ಕಲ್ಲುಗಳನ್ನು ಎಸೆದರೂ ಅದನ್ನೇ ಬಂಡವಾಳ ಮಾಡಿಕೊಂಡು ಮೆಟ್ಟಿಗಳಾಗಿ ಪರಿವರ್ತಿಸಿ ವಿಜಯದ ನಗೆ ಬೀರಿದವರು ಶ್ರೀ ನರೇಂದ್ರ ಮೋದಿಯವರು. ಅವರ ವಾಕ್ ಚಾತುರ್ಯಕ್ಕೆ, ದೃಢ ಹೆಜ್ಜೆಗೆ, ಗುರಿ ತಲುಪಿದ ರೀತಿಗೆ ಶತ್ರುವಾದರೂ ಕೂಡಾ ತಲೆದೂಗಿಯಾನು.  

ಆದರೆ, ಇಲ್ಲಿ ನಡೆದಿದ್ದೇ ಬೇರೆ. ನರೇಂದ್ರಮೋದಿಯವರನ್ನು ವೈಭವೀಕರಿಸುವಂತಹ ವೇಳೆಯಲ್ಲಿ ಧರ್ಮವು ಕೂಡಾ ನುಸುಳಿದ್ದು ಖಂಡನೀಯ. ನಮ್ಮ ದೇಶ ಜಾತ್ಯಾತೀತ ದೇಶ. ಇಲ್ಲಿ ಹಲವಾರು ಧರ್ಮಗಳಿವೆ. ಈಗಿನ ಸಂದರ್ಭದಲ್ಲಿ ಹಿಂದೂ ಧರ್ಮವನ್ನು ಹೀಗಳೆಯುವುದು ಸರಳ ಬಿಟ್ಟಿ ಪ್ರಚಾರವನ್ನು ತಂದುಕೊಡುವ ಸುಲಭ ಮಾರ್ಗವಾಗಿದೆ. ಇನ್ನು ಸ್ವಘೋಷಿತ ಬುದ್ಧಿಜೀವಿಗಳು ದಿನ ಬೆಳಗಾದರೆ ಇದನ್ನೇ ತಮ್ಮ ಕಾಯಕವನ್ನು ಮಾಡಿಕೊಂಡಿದ್ದಾರೆ. ಟಿ.ವಿ. ಯಲ್ಲಿ ಇದನ್ನೆಲ್ಲಾ ನೋಡಿ ತೀರಾ ಅಸಹ್ಯವಾಗಿದೆ. ಯಾರೋ ಒಬ್ಬರು ದೇವರ ಮೂರ್ತಿ ಮೇಲೆ ಉಚ್ಚೆ ಉಯ್ದರಂತೆ, ಇನ್ನಾರೋ ರಾಮಾಯಣ ಮಹಾಭಾರತದ ಕಥೆಗಳು ಅತ್ಯಾಚಾರಕ್ಕೆ ಪ್ರೇರಣೆಯಂತೆ ಎನ್ನುವಂಥಹ ಬಾಲಿಶ ಹೇಳಿಕೆಗಳನ್ನು ಕೊಡುತ್ತಾ ತಾವು ಜೀವಂತವಾಗಿದ್ದೇವೆ ಎಂದು ಸಾರುತ್ತಿದ್ದಾರೆ. ಇನ್ನು ಇತರೆ ಧರ್ಮಕ್ಕೆ ಬಂದರೆ, ಅವರಿಗೆ ಅಷ್ಟೊಂದು ಜನ ಹೆಂಡಿರು ಮಾಡಿಕೊಳ್ಳಬಹುದಂತೆ, ಮುಖ-ಮೈ ಕಾಣದ ಹಾಗೆ ಬಟ್ಟೆ ಹಾಕಿಕೊಳ್ಳಬೇಕಂತೆ, ಆ ಧರ್ಮದಲ್ಲಿ ಗುಲಾಮರನ್ನು ಹೇಗೆ ಬೇಕಾದರೂ ಬಳಸಿಕೊಳ್ಳಬಹುದಂತೆ... ಇತ್ಯಾದಿಗಳ ಚರ್ಚೆಗಳೇ ಇತ್ತೀಚಿನ ದಿನಗಳಲ್ಲಿ ದೊಡ್ಡ ವಿಷಯವಾಗಿದೆ.

 ನಿಜಕ್ಕೂ ಈ ತಲೆಮಾರಿನಲ್ಲಿ ಅತ್ಯಂತ ಅಪಾಯದಲ್ಲಿರುವುದು ಹಿಂದೂ ಧರ್ಮ. ನಮ್ಮ ಭಾರತ ದೇಶವನ್ನು ಹಿಂದೂಸ್ತಾನ ಎಂದು ಕರೆಯುವುದು ಯಾವುದೋ ಪ್ರಧಾನಿಯಿಂದಲೇ ನಿಂತುಹೋಗಿದೆ. ಹಿಂದೂಗಳು ಸರ್ವ ಧರ್ಮ ಸಹಿಷ್ಣರು. ಪ್ರಪಂಚದ ಎಲ್ಲಾ ಧರ್ಮಗಳು ಜನರನ್ನು ತಮ್ಮ ಧರ್ಮಕ್ಕೆ  ಸೇರಿಸಿಕೊಳ್ಳಲು ಆಸೆ ಆಮಿಷಗಳನ್ನು ತೋರಿಸುತ್ತಿದ್ದರೆ, ಈ ಹಿಂದೂ ಧರ್ಮವೊಂದೇ ಎಂದೂ ತನ್ನ ಧರ್ಮದ ಪ್ರಚಾರ ಮಾಡಿ ಯಾರನ್ನೂ ಓಲೈಸಲಿಲ್ಲ. ಮುಸ್ಲಿಂಮರು, ಆಂಗ್ಲರು, ಡಚ್ಚರು ಇತ್ಯಾದಿಗಳು ನಮ್ಮ ಮೇಲೆ ಒಮ್ಮೆಲೆ ಯುದ್ಧಕ್ಕೆ ಬಂದವರಲ್ಲ.  ಆಶ್ರಯ ಕೇಳಿಕೊಂಡು ಬಂದವರು. ನಂತರ ತಾವೇ ನಮ್ಮ ಮೇಲೆ ಬಿದ್ದು ದೇಶವನ್ನು ವಶಪಡಿಸಿಕೊಂಡವರು. ಇದು ಪ್ರಪಂಚಕ್ಕೇ ಗೊತ್ತಿರುವ ವಿಷಯ. ಸ್ವಾತಂತ್ರ್ಯಾ ನಂತರ ಪಾಕಿಸ್ತಾನ ಸೇರಿಸಿಕೊಳ್ಳದ ಮುಸ್ಲಿಂರನ್ನು, ಟಿಬೆಟಿಗರನ್ನು, ಯಹೂದಿಗಳನ್ನು ಪ್ಯಾಲಸ್ತೇನಿಯರನ್ನು ಕರೆದು, ಅಪ್ಪಿ ಮುದ್ದಾಡಿ, ತನ್ನವರೆಂದು ಜಗತ್ತಿಗೆ ಸಾರಿದ್ದು ಈ ನನ್ನ ಭಾರತಾಂಬೆ ಮತ್ತು ಈ ನನ್ನ ಭಾರತಾಂಬೆಯ ಹಿಂದೂ ಮಕ್ಕಳು. ಇದು ನಡೆದು ಸಾಕಷ್ಟು ದಶಕಗಳು ಕಳೆದಿವೆ. ಇತರೆ ಧರ್ಮದವರನ್ನು ನಾವು ನಮ್ಮ ಅಣ್ಣ ತಮ್ಮಂದಿರೆಂದೇ ಒಪ್ಪಿಕೊಂಡುಬಿಟ್ಟಿದ್ದೇವೆ. ಅವರು ನಮ್ಮ ಗಣೇಶನನ್ನು ಕೂರಿಸಿ ಪೂಜೆ ಮಾಡಿದರೆ, ನಾವು ಪ್ರತಿ ವರ್ಷ ಅವರ ರಂಜಾನ್ ಉಪವಾಸವನ್ನು  ಕೈಗೊಳ್ಳುತ್ತೇವೆ. ನಿಮಗ್ಯಾರಿಗಾದರೂ ಸಂಶಯವಿದ್ದರೆ, ರೋಣಕ್ಕೆ ಬಂದು ನೋಡಿ. ಜಾತಿ-ಧರ್ಮದ ವಿಷಯಗಳು ಈಗ ಹಳತಾಗಿವೆ. ಚಲಾವಣೆಯಿಲ್ಲದ ನಾಣ್ಯ. ಒಂದು ಹಂತದಲ್ಲಿ ಎಲ್ಲವೂ ಸರಿಯಾಗಿತ್ತು.

ಆದರೆ, ಧರ್ಮಾಂಧತೆ ಬಿಡಬೇಕಲ್ಲ.. ಯಾವುದೋ ದೇಶದಲ್ಲಿನ ತನ್ನ ಧರ್ಮದವರನ್ನು ತನ್ನವರೆಂದು ಒಪ್ಪಿಕೊಳ್ಳಲಿ. ಆದರೆ, ಅದರ ಸಲುವಾಗಿ ನಮ್ಮ ದೇಶದವರ ಅಣ್ಣ ತಮ್ಮಂದಿರ ಮೇಲೆ ದಾಳಿ ನಡೆಸುವುದು ಯಾವ ನ್ಯಾಯ? ಬೇರೇ ದೇಶದವರು ನಮ್ಮಲ್ಲಿ ಬಂದು ಕೊಂದಾಗ, ಆತನು ಅಲ್ಪ ಸಂಖ್ಯಾತನೆಂದು, ವಾದಿಸಿ, ಅವನನ್ನು ಬಿಡುಗಡೆಗೊಳಿಸಬೇಕೆಂದು ವಾದಿಸುವುದು ಯಾವ ನ್ಯಾಯ? ಆತನನ್ನು ರಕ್ಷಿಸುವುದು ಯಾವ ನ್ಯಾಯ??? ಯಾವ ದೇಶ ಪ್ರೇಮಿ ತಾನೆ ಇದನ್ನು ಸಹಿಸಿಯಾನು? ಅಲ್ಪಸಂಖ್ಯಾತ ಮುಖಂಡರ, ಬುದ್ಧಿಜೀವಿಗಳೆನಿಸಿಕೊಂಡವರ ಇಂತಹ ಮಾತುಗಳು ನಿರ್ಧಿಷ್ಟ ಧರ್ಮದವರ ಮೇಲೆ ಅನುಮಾನ ಮೂಡಿಸುವುದಿಲ್ಲವೇ? ಇಲ್ಲಿನ ಧರ್ಮ ಬಾಂಧವರ ಸಹಕಾರ ಇಲ್ಲದೇ ಬೇರೇ ದೇಶದವರು ಇಲ್ಲಿ ಬಂದು ದಾಳಿ ಮಾಡಲು ಸಾಧ್ಯವೇ?

ನನ್ನ ಪ್ರೀತಿಯ ದೇಶದ ಮುಸ್ಲಿಂ ಅಣ್ಣ ತಮ್ಮಂದಿರೇ.. ಎಲ್ಲಿ ಹೋಯಿತು ನಿಮ್ಮ ದೇಶಭಕ್ತಿ??? ಎಂದು ಚೀರಿ ಕೇಳೋಣ ಎಂದೆನಿಸುತ್ತದೆ. ಆದರೆ, ಎಲ್ಲಾ ನನ್ನ ಮುಸ್ಲಿಂ ಅಣ್ಣ ತಮ್ಮಂದಿರು ಈ ರೀತಿಯಲ್ಲ. ಎಲ್ಲೋ ಕೆಲವು ಧರ್ಮಾಂಧರು ಎಂದು ಮನಸ್ಸನ್ನು ಸಮಾಧಾನಗೊಳಿಸಿಕೊಳ್ಳುತ್ತೇನೆ. ಎಷ್ಟೊಂದು ಜನ ಮುಸ್ಲಿಂ ಬಾಂದವರು ಸೇನೆಯಲ್ಲಿಲ್ಲವೇ? ಭಾರತಾಂಬೆಯನ್ನೇ ಉಸಿರೆಂದು ಭಾವಿಸಿಲ್ಲವೇ? ಕೆಲವರಿಂದ ಇಂತಹ ದೇಶಭಕ್ತರಿಗೂ ಕೂಡಾ ಕೆಟ್ಟ ಹೆಸರು. ನನ್ನ ಸ್ನೇಹಿತರಲ್ಲೂ ಮುಸ್ಲಿಮರಿದ್ದಾರೆ. ಅವರ ಧರ್ಮವನ್ನು ನಾನು ಗೌರವಿಸುತ್ತೇನೆ. ಅವರೂ ಕೂಡಾ ನಮ್ಮ ಧರ್ಮವನ್ನು ಗೌರವಿಸುತ್ತಾರೆ. ಅವರಲ್ಲಿ ಕೂಡಾ ಅಪ್ಪಟ ಭಾರತೀಯರಿದ್ದಾರೆ. ಅವರ ಜೊತೆ ಕುಳಿತಾಗ ಧರ್ಮಕ್ಕೂ ಧರ್ಮಾಂಧತೆಯ ಬಗೆಗೂ ವ್ಯತ್ಯಾಸವನ್ನು ತಿಳಿಸಲು ಕೂಡಾ ಪ್ರಯತ್ನಿಸಿದ್ದೇನೆ.

ನರೇಂದ್ರ ಮೋದಿಯ ಪರ ಪ್ರಚಾರ ಮಾಡುವಾಗ ಕೆಲವು ಫೇಸ್ ಬುಕ್ಕಿಗರು ಹಿಂದೂ ಧರ್ಮವನ್ನು ರಕ್ಷಿಸಲು ಬಂದ ಮಹಾತ್ಮ ಎಂಬಂತೆ ಚಿತ್ರಿಸಿದರು. ಒಂದು ರೀತಿಯಲ್ಲಿ ಇದು ತಪ್ಪು ಕಾಣಲಿಲ್ಲ. ಹಿಂದೂ ಧರ್ಮವೆಂದರೆ,  ಅದೊಂದು ಜೀವನ ಕಲೆ. ಸರ್ವ ಧರ್ಮ ಸಹಿಷ್ಣುತೆಯನ್ನು ಈ ಜೀವನ ಪದ್ಧತಿ ಕಲಿಸಿಕೊಡುತ್ತದೆ. ಗುಜರಾತಿನಲ್ಲಿ ಆತ ಮಾಡಿದ್ದು ಅದನ್ನೇ. ಅಪ್ಪಟ ಹಿಂದೂವಾಗಿ ನಡೆದುಕೊಂಡ. ಎಲ್ಲರನ್ನೂ ತಮ್ಮ ಅಣ್ಣ ತಮ್ಮಂದಿರಂತೆ ನೋಡಿಕೊಂಡಿದ್ದಕ್ಕೇ ಅಭೂತಪೂರ್ವವಾಗಿ ಚುನಾವಣೆಯಲ್ಲಿ ಜಯಗಳಿಸಿದ್ದು ಎಂಬುದನ್ನು ಒಪ್ಪಿಕೊಳ್ಳಬೇಕಾದ ಪರಿಸ್ಥಿತಿ ಇದೆ. ಹಿಂದೂ ಧರ್ಮದಲ್ಲಿ ಹುಳುಕುಗಳಿಲ್ಲ. ಇನ್ನು ಕೆಲವರು ವಾದಿಸುವ ಮೂಢನಂಬಿಕೆಗಳೆಂಬ ಆಚರಣೆಗಳು ಧರ್ಮದಲ್ಲಿ ಪ್ರಸ್ತಾಪವಾಗೇ ಇಲ್ಲ. ಅದು ಮಾನವ ಸಮಾಜ ತಮ್ಮಿಂದ ತಾವೇ ರೂಢಿಸಿಕೊಂಡಿ ಬಂದಂತವುಗಳು. ಅದರಲ್ಲಿ ಎಲ್ಲವೂ ತಪ್ಪೆಂದಲ್ಲ. ಸರಿಯಾಗಿದ್ದಿದ್ದನ್ನು ಸ್ವೀಕರಿಸಿ, ತಪ್ಪಿದ್ದಂತವುಗಳನ್ನು ತಿದ್ದಿದರಾಯಿತು. ಆದರೆ, ಈ ಬು.ಜೀ. ಗಳಿಗೆ  ಅದೆಲ್ಲ ಬೇಕಿಲ್ಲ. ಒಂದು ಧರ್ಮದವನ ನಂಬಿಕೆಯನ್ನು ಒಡೆದು ಚೂರು ಚೂರು ಮಾಡಲೇಬೇಕೆಂಬ ಹಠ ತೊಟ್ಟು ನಿಂತಂತಿದೆ. ದೇವರೆನ್ನುವುದು ಒಂದು ನಂಬಿಕೆ. ನಂಬಿಕೆಯ ಆಧಾರದ ಮೇಲೆಯೇ ಪ್ರಪಂಚ ನಿಂತಿರುವುದು. ಒಬ್ಬ ದೇವರ ಮೂರ್ತಿ ಮೇಲೆ ಉಚ್ಛೆ ಹೊಯ್ದರೆ ಅದು ಮೂರ್ತಿಯ ಮೇಲೆ ಮೂತ್ರ ಮಾಡಿದ ಹಾಗಲ್ಲ. ಮಾನವನ ನಂಬಿಕೆಯನ್ನೇ ಪ್ರಶ್ನಿಸುವಂಥದ್ದು.  ಛೆ.. ಎಂತಹ ಅಸಹ್ಯಕರ ಬೆಳವಣಿಗೆಗಳು ಬೆಳೆದುಬಿಟ್ಟವು?? ಇದನ್ನೆಲ್ಲಾ ಎಲ್ಲ ಹಿಂದೂಗಳೂ ಪ್ರತಿಭಟಿಸಲಿಲ್ಲ. ಯಾಕೆ ಹೇಳಿ? ಅವರು ಭಾರತೀಯರಾಗಿದ್ದರು. ಈ ಮಣ್ಣು ಅವರಿಗೆ ಎಂದೂ ಹಿಂಸೆಯನ್ನು ಕಲಿಸಿಲ್ಲ. ಅವರೆಂದಿಗೂ ಧರ್ಮಾಂಧತೆಯನ್ನು ಹೊಂದಿಲ್ಲ. ಕೆಲವರು ಅವರ ವಿರೋಧವಾಗಿ ಮಾತನಾಡಿದರು. ಆದರೆ ಅಂಥವರನ್ನು ಕಾನೂನು ರೀತಿ ಶಿಕ್ಷಿಸಲು ಅಥವಾ ತಮ್ಮದೇ ರೀತಿಯಲ್ಲಿ ಪ್ರತಿಭಟಿಸಿದರೇ ವಿನಃ ಬೇರೇ ದಾರಿ ಹಿಡಿಯಲಿಲ್ಲ. ಅದೇ ಬೇರೇ ದೇಶದಲ್ಲಿ ಅಲ್ಲಿನ ಧರ್ಮದ ಬಗ್ಗೆ ಮಾತನಾಡಿದರೆ, ಆ ಧರ್ಮದವರು ಬಿಟ್ಟಾರೆಯೇ? ರುಂಡಮುಂಡವನ್ನು ಬೇರೆ ಮಾಡಿಬಿಟ್ಟಾರು. ನಮ್ಮ ದೇಶದ ಬೇರೇ ಧರ್ಮದವರು ಕೂಡಾ ಈ ರೀತಿಯಾಗಿ ಹಿಂಸಿಸಲು ಹೋಗುವುದಿಲ್ಲ. ಯಾಕೆಂದರೆ, ಅವರು ಕೂಡಾ ಭಾರತಾಂಬೆಯ ಮಕ್ಕಳು. ಈ ಮಣ್ಣಿನಲ್ಲಿ ಧರ್ಮಸಹಿಷ್ಣುತೆ ಕೂಡಾ ಅವರಿಗೆ ಬಳುವಳಿಯಾಗಿ ಬಂದುಬಿಟ್ಟಿದೆ. ಆದರೆ, ಹೊರಗಿನಿಂದ ಬರುವಂತಹ ಪ್ರಚೋದನೆಯಿದೆಯಲ್ಲಾ ಅದು ತೀರಾ ಹಾನಿಕಾರಕ. ನನ್ನ ಮುಸ್ಲಿಂ ಅಣ್ಣ ತಮ್ಮಂದಿರು ಈ ಪ್ರಚೋದನೆಗೆ ಒಳಗಾಗದಿರಲೆಂದು ಸದಾ ಆಶಿಸುತ್ತೇನೆ.

ಇನ್ನು ಫೇಸ್ ಬುಕ್ಕಿನಲ್ಲಿನ ಇತ್ತೀಚಿನ ವಿ.ಆರ್. ಭಟ್ ರವರ ಪ್ರಕರಣವನ್ನು ನೋಡಿದರೆ, ಪ್ರತಿಭಾ ರವರದ್ದು ಮತ್ತು ಭಟ್ಟರದ್ದು ಇಬ್ಬರದ್ದೂ ಸಮಾನವಾದ ತಪ್ಪು ಇದೆ. ಪ್ರತಿಭಾ ರವರು ಭಟ್ಟರನ್ನು ಪ್ರಚೋದಿಸಿರುವುದನ್ನು ಸೂಕ್ಷ್ಮವಾಗಿ ಗಮನಿಸಿದರೆ ಗೊತ್ತಾಗುತ್ತದೆ. ಇನ್ನು ಇವತ್ತಿನ ಸುದ್ಧಿಯಂತೆ ಭಟ್ಟರ ಬಂಧನವಾಗದಿದ್ದರೆ ರಾಜ್ಯಾದ್ಯಂತ ಪ್ರತಿಭಟನೆ ಕೂಡಾ ಇದೆಯಂತೆ. ಅಯ್ಯೋ ನನ್ನ ದೇಶವೇ.. ಅಮಾಯಕ ಮುಗ್ಧ ಹೆಣ್ಣುಮಕ್ಕಳ, ಹಸುಗೂಸುಗಳ ಅತ್ಯಾಚಾರ ಮಾಡಿದವರನ್ನು ಹಿಡಿಯುವುದನ್ನು ಬಿಟ್ಟು, ಇನ್ನು ಮುಂದೆ ಯಾವುದೇ ಹೆಣ್ಣು ಮಗಳ ಮೇಲೆ ಅತ್ಯಾಚಾರವಾಗದಂತೆ ತಡೆಯುವುದನ್ನು ಬಿಟ್ಟು ಪೋಲೀಸ್ ಇಲಾಖೆ ಭಟ್ಟ ಎಂಬ ಬ್ಲಾಗಿಗನೊಬ್ಬನ ಹಿಂದೆ ಬೀಳಬೇಕಂತೆ. ಏನಾಗಿದೆ ನಮ್ಮವರಿಗೆ??? ಭಟ್ಟರ ಪ್ರಕರಣ ತೀರಾ ವೈಯುಕ್ತಿಕವಾದದ್ದು. ಇದು ಧರ್ಮದ ವಿಚಾರವಾಗಿ ಮಾರ್ಪಾಡಾಗಿದೆ. ಪ್ರತಿಭಾ ರವರು ಕೂಡಾ ಒಂದೇ ಧರ್ಮದವರಾದರೂ ಕೂಡಾ ಧರ್ಮದ ವಿಷಯ ಇಲ್ಲಿ ಮುಖ್ಯವಾಗಿದೆ. ಇದಕ್ಕೆ ರಾಜಕೀಯ ಪಕ್ಷದ ಮತ್ತು ಬು.ಜೀ. ಗಳ ಬೆಂಬಲ ಬೇರೆ. ಈ ಭೂಮಿಯೇ ಬಾಯಿ ತೆರೆದು ನುಂಗಬಾರದೇ ಎನಿಸುವಷ್ಟು ಅಸಹನೆ ಉಂಟಾಗುತ್ತಿದೆ. ಛೀ.. ಈ ಪ್ರಕರಣಕ್ಕೆ ಎಳ್ಳು ನೀರು ಬಿಡೋಣ. ಅವರು ಕಾನೂನು ಪ್ರಕಾರವಾಗಿ ಕಿತ್ತಾಡಿಕೊಳ್ಳಲಿ  ಬಿಡಿ. ತಪ್ಪಿದ್ದವರಿಗೆ ಶಿಕ್ಷಯಾಗಲಿ.


ಎಲ್ಲರಲ್ಲೂ ಒಂದು ವಿನಂತಿ...

ಸ್ನೇಹಿತರೇ ಮೊದಲು ನಮ್ಮ ಧರ್ಮಾಂಧತೆಯನ್ನು ಹೋಗಲಾಡಿಸೋಣ. ನಮ್ಮ ಧರ್ಮದ ಬಗೆಗಿನ ನಮ್ಮ ಅಭಿಮಾನ ನಮ್ಮಲ್ಲೆ ಇರಲಿ. ಸಮಾಜದಲ್ಲಿ ಎಲ್ಲ ಧರ್ಮದವರೂ ಒಂದೇ. ಮೊದಲು ನಾವು ಭಾರತೀಯರಾಗೋಣ. ಎಲ್ಲಾ ಧರ್ಮವನ್ನು ಗೌರವಿಸೋಣ. ನಾನು ಮೊದಲು ಹಿಂದೂ ಅಥವಾ ಮುಸ್ಲಿಂ ನಂತರ ಭಾರತೀಯ ಎನ್ನುವ ತಪ್ಪು ಕಲ್ಪನೆಯನ್ನು ಹೋಗಲಾಡಿಸಿಕೊಳ್ಳಿ. ನಾವು ಮೊದಲು ಭಾರತೀಯರೆಂದು ಎಲ್ಲರೂ ಒಪ್ಪಿಕೊಳ್ಳೋಣ. ಇನ್ನು ಮಾನವ ಹಕ್ಕುಗಳಿಗೆ ಬಂದರೆ, ನಮ್ಮಲ್ಲಿನ ಮಹಿಳೆಯರ ಶೋಷಣೆ ಬಗ್ಗೆ (ಎಲ್ಲಾ ಧರ್ಮದಲ್ಲಿ ಇದೆ) ಚರ್ಚೆ ಮಾಡಿ ಅದನ್ನು ಹೋಗಲಾಡಿಸೋಣ. ಮೊದಲು ಎಲ್ಲರೂ ಶಿಕ್ಷಣ ಪಡೆಯುವಂತಾಗಲಿ. ನೈತಿಕತೆಯನ್ನು ಕಲಿಸೋಣ ಇದರಿಂದ ಅತ್ಯಾಚಾರಗಳು ಕಡಿಮೆಯಾದಾವು. ನಾವು ನಮ್ಮಲ್ಲಿನ ಆರ್ಥಿಕ ದುರ್ಬಲತೆಯ ವಿರುದ್ಧ ಹೋರಾಡೋಣ. ನಮ್ಮ ದೇಶದ ಬಗ್ಗೆ ಯೋಚಿಸೋಣ. ಎಲ್ಲ ಧರ್ಮದವರು ಅಣ್ಣ ತಮ್ಮಂದಿರಂತೆ ಬಾಳೋಣ. ಅದು ಬಿಟ್ಟು ಧರ್ಮದ ವಿಷಯವನ್ನೇ ಪ್ರಚಾರಕ್ಕೆ ಬಳಸಿಕೊಳ್ಳುವವರನ್ನು ವೈಭವೀಕರಿಸುವುದರ ಬದಲಾಗಿ ಕಾಲು ಕಸದಂತೆ ತಿರಸ್ಕರಿಸೋಣ.


ಕೊನೆಯ ಸಾಲುಗಳು..

ಸ್ನೇಹಿತರೇ, ಕಿತ್ತಾಟವನ್ನು ಇಲ್ಲಿಗೇ ನಿಲ್ಲಿಸಿ. ನೀವು ಬುದ್ಧಿ ಜೀವಿಗಳಂತೆ ನಟನೆ  ಮಾಡಬೇಡಿ. ಎಲ್ಲರಿಗೂ ಸಮಾನವಾಗಿ ಗೌರವ ನೀಡೋಣ. ಬ್ಲಾಗಿಗರೆಲ್ಲರೂ ಒಂದೇ ಎಂಬ  ಮಂತ್ರ ಪಠಿಸೋಣ.


-ಯಳವತ್ತಿ.