ಖಾಯಂ ಓದುಗರು..(ನೀವೂ ಸೇರಬಹುದು)

17 October 2010

ಶೀರ್ಷಿಕೆ ಕೊಡಲಾಗಲಿಲ್ಲ..

ಈ ಲೇಖನಕ್ಕೆ ಶೀರ್ಷಿಕೆ ಯಾಕೆ ಕೊಡಬೇಕು ಅಂತಾ ನನಗೆ ಗೊತ್ತಾಗಲಿಲ್ಲ.

ಅವಾಗ ನನಗೆ 12-13 ವರ್ಷ ವಯಸ್ಸು. ನಮ್ಮ ಮನೆಯ ಪಕ್ಕದಲ್ಲೇ ಒಂದು ಮಣ್ಣಿನ ಮನೆಯಿತ್ತು. ತುಂಬಾ ಉದ್ದವಾದ ಮಣ್ಣಿನ ಮನೆ. ಆ ಮನೆಯ ಅರ್ಧ ಭಾಗ ಬಿದ್ದಿತ್ತು. ಇನ್ನರ್ಧ ಭಾಗದಲ್ಲಿ ಯಾರೂ ವಾಸ ಮಾಡದೇ ಖಾಲಿ ಉಳಿದುಕೊಂಡಿತ್ತು. ಆ ಮನೆಗೆ ಯಾವಾಗಲೂ ನಮ್ ದೇವಸ್ಥಾನದ ಪೂಜಾರಪ್ಪ ಬೀಗ ಜಡಿದಿರುತ್ತಿದ್ದರಿಂದ, ನಮಗ್ಯಾವುದೂ ಇದರ ಬಗ್ಗೆ ಒಂಚೂರು ಸಹ ಇಂಟರೆಸ್ಟ್ ಇರಲಿಲ್ಲ. ಆ ಮನೆಯಲ್ಲಿ ಹಿಂದೆ ವಾಸ ಇದ್ದವರೊಬ್ಬರಿಗೆ ಮಳೆ ಬಂದಾಗ ಕರೆಂಟಿನಿಂದ ಗ್ರೌಂಡ್ ಆಗಿ ಶಾಕ್ ಹೊಡೆಸಿಕೊಂಡು ಅಸ್ವಸ್ಥರಾಗಿದ್ದಕ್ಕೆ ಅವರನ್ನು ಕರೆದುಕೊಂಡು ಹೋಗಲು ಆಂಬುಲೆನ್ಸ್ ಬಂದಿತ್ತು. ಆಗಿನ ಸಮಯದಲ್ಲಿ ಯಾರನ್ನಾದರೂ ಕರೆದುಕೊಂಡು ಹೋಗಲು ಆಂಬುಲೆನ್ಸ್ ಬಂದಿತ್ತೆಂದರೆ, ಅದು ಬಹು!! ದೊಡ್ಡ ?? ಸಂಗತಿ.

ಆಮೇಲೆ ಅವರು ಮನೆ ಖಾಲಿ ಮಾಡಿಕೊಂಡು ಹೊರಟು ಹೋಗಿದ್ದರು. ಆ ಮನೆ ದೇವಸ್ಥಾನಕ್ಕೆ ಸೇರಿದ್ದರಿಂದ ಅದರ ಬಾಡಿಗೆ ದೇವಸ್ಥಾನದ ಕಮಿಟಿಗೆ ಹೋಗುತ್ತಿತ್ತು. ಆ ಮನೆಯ ಅಭಿವೃದ್ಧಿಗೆ ಅವರ್ಯಾರೂ ಗಮನ ಕೊಟ್ಟಿರಲಿಲ್ಲ. ಮೊದಲೇ ಮಣ್ಣಿನ ಮನೆ, ಅರ್ಧ ಬಿದ್ದಿರೋದು, ಇನ್ನೂ ಸ್ವಲ್ಪ ದಿನದಲ್ಲಿ ಬಿದ್ದು ಹೋಗುತ್ತೆ ಅಂತ ಸುಮ್ಮನಾಗಿದ್ದರು ಅನ್ಸುತ್ತೆ.

ಆದರೆ, ಒಂದು ದಿನ ಆ ಮನೆಗೆ ಅದೆಲ್ಲಿಂದಲೂ ಒಬ್ಬಳು ಸುಮಾರು 48-50 ವರ್ಷದ ಹೆಂಗಸು ಬಂದು ಸೇರಿಕೊಂಡಳು. ಅವತ್ತು ನಾನು ಮಧ್ಯಾನ್ಹ ಊಟಕ್ಕೆ ಸ್ಕೂಲಿಂದ ಬಂದಾಗ, ಆ ಹೆಂಗಸು ಅಮ್ಮನ ಹತ್ತಿರ ಏನೋ ಮಾತಾಡುತ್ತಿದ್ದಳು. ಆಕೆ ಅಮ್ಮನ ಬಳಿ ಮನೆಕೆಲಸ ಕೇಳಿಕೊಂಡು ಬಂದಿದ್ದಳು. ನಮ್ಮ ಅಪ್ಪ ಕೆಲಸಕ್ಕೆ ಹೆಂಗಸನ್ನು ಇಟ್ಟುಕೊಳ್ಳಲು ಒಪ್ಪುತ್ತಿರಲಿಲ್ಲ. ಆದರೆ, ಆಕೆಯ ಕಷ್ಟಗಳನ್ನು ಅಮ್ಮನ ಬಳಿ ಏನು ಹೇಳಿಕೊಂಡಿದ್ದಳೋ? ಅಮ್ಮ ಅದಕ್ಕೆ ಕರಗಿ, ತಿಂಗಳಿಗೆ ಅರವತ್ತು ರೂಪಾಯಿಯ ಹಾಗೆ, ಎರಡು ದಿನಕ್ಕೊಮ್ಮೆ ನಮ್ಮ ಮನೆ ಬಟ್ಟೆ ಒಗೆಯುವ ಕೆಲಸಕ್ಕೆ ನೇಮಿಸಿಕೊಂಡಳು.

ಆಕೆ ಎರಡು ದಿನಕ್ಕೊಮ್ಮೆ ನಮ್ಮ ಮನೆಯ ಬಟ್ಟೆ ಒಗೆಯಲು ಬರುತ್ತಿದ್ದಳು. ನೋಡಲು ತುಂಬಾ ಉದ್ದವಾಗಿದ್ದಳು, ಮೈಯಲ್ಲಿ ರಕ್ತವಿಲ್ಲದಿದ್ದರೂ, ಕಣ್ಣಲ್ಲಿ ಜೀವಕಳೆ ಕಾಣುತ್ತಿತ್ತು. ನಮ್ಮ ಮನೆಯಲ್ಲದೇ, ಅಕ್ಕ ಪಕ್ಕದ ಮನೆಯಲ್ಲೂ ಸಹ ಒಂದೊಂದು ಕೆಲಸ ಗಿಟ್ಟಿಸಿಕೊಂಡಿದ್ದಳು. ದಿನಾ ಬೆಳಿಗ್ಗೆ ನಮಗಿಂತ ಮೊದಲೇ ಎದ್ದಿರುತ್ತಿದ್ದಳು. 6 ಗಂಟೆಗೆ ನಾವು ಟ್ಯೂಷನ್ ಗೆ ಹೋಗುವ ಮೊದಲೇ ದೇವಸ್ಥಾನದ ಕಸ ಗುಡಿಸಿ, ಸಾರಿಸಿ, ರಂಗೋಲೆ ಇಡುತ್ತಿರುತ್ತಿದ್ದಳು. ಆಕೆ ರಂಗೋಲಿ ಇಡುವುದನ್ನು ನಾವು ನಿಂತು ನೋಡುತ್ತಿದ್ದರೆ, ಆಕೆ ನಮ್ಮನ್ನು ನೋಡಿ ಒಂದು ಮುಗುಳ್ನಗೆ ಬೀರಿ ಸುಮ್ಮನಾಗುತ್ತಿದ್ದಳು. ದಿನಾಲು ಒಂದೊಂದು ಥರಾ ರಂಗೋಲಿ ಇಟ್ಟು ತನ್ನ ಕೌಶಲ್ಯವನ್ನು ತೋರಿಸುತ್ತಿದ್ದರೆ, ದೇವಸ್ಥಾನಕ್ಕೆ ಬರುತ್ತಿದ್ದ ಹೆಂಗಳೆಯರು, ಪ್ರತಿ ದಿನ ರಂಗೋಲಿಯನ್ನು ನೋಡುತ್ತಾ, ಇಷ್ಟರಿಂದ ಇಷ್ಟು ಚುಕ್ಕೆಗಳು ಅಂತಾ ಮನದಲ್ಲಿ ಲೆಕ್ಕ ಹಾಕಿಕೊಂಡು, ಮರುದಿನ ತಮ್ಮ ಮನೆಯ ಮುಂದೆ ಅಂಥದ್ದೇ ರಂಗೋಲಿಯನ್ನು ಇಡಲು ಪ್ರಯತ್ನಿಸಿ, ಒಮ್ಮೊಮ್ಮೆ ಅದು ಸರಿ ಬರದೇ, ಒಂದು ಹೋಗಿ ಇನ್ನೊಂದು ಆಗಿ ಬಿಡುತ್ತಿತ್ತು. ತನ್ನನ್ನು ಅನುಕರಣೆ ಮಾಡುತ್ತಿದ್ದಾರೆಂದು ತಿಳಿದಿದ್ದರೂ ಆಕೆ ಯಾವುದೇ ಗರ್ವ ತೋರುತ್ತಿರಲಿಲ್ಲ. ಹಬ್ಬಗಳು ಬಂದಾಗಲಂತೂ ದೊಡ್ಡದಾದ, ಸುಂದರವಾದ ರಂಗೋಲಿ ಇಟ್ಟಳೆಂದರೆ, ಹಾದಿ-ಬೀದೀಲಿ ಹೋಗುವವರೆಲ್ಲರೂ ಅದರ ಕಡೆಗೆ ದೃಷ್ಟಿ ನೆಟ್ಟಿರುತ್ತಿದ್ದಳು. ಇಷ್ಟೊಂದು ರೀತಿ ರಂಗೋಲಿಯನ್ನು ಇಡೋದನ್ನು ಎಲ್ಲಿಂದ ಕಲಿತೆ ಅಂತಾ ಹೆಂಗಳೆಯರೆಲ್ಲರೂ ಸಂಜೆ ಹೊತ್ತು ಸೇರಿದಾಗ ಕೇಳಿದರೆ, ಒಂದು ನಗು ಬೀರಿ ಸುಮ್ಮನಾಗುತ್ತಿದ್ದಳು.

ಪ್ರತಿ ದಿನ ನಮ್ಮಮ್ಮ ಹೆಚ್ಚಾಗಿ ಉಳಿಯುತ್ತಿದ್ದ ಅಡಿಗೆ, ಹಣ್ಣು-ಹಂಪಲು, ಕೊಡುತ್ತಿದ್ದಳು. ಅವಳೆಂದೂ ತನಗೆ ಕೊಟ್ಟದ್ದನ್ನು ಆಕೆ ಯಾವತ್ತೂ ಅಲ್ಲಿಯೇ ತಿನ್ನುತ್ತಿರಲಿಲ್ಲ. ಅದನ್ನೆಲ್ಲಾ ತಾನಿದ್ದ ಮಣ್ಣಿನ ಮನೆಯಲ್ಲಿ ತೆಗೆದುಕೊಂಡು ಹೋಗುತ್ತಿದ್ದಳು. ಅವಳಿಗೆ ಮಕ್ಕಳೆಂದರೆ ಏನೋ ಪ್ರೀತಿ, ಸಾಯಂಕಾಲದ ಹೊತ್ತು ಎಲ್ಲ ಮಕ್ಕಳೆಲ್ಲರೂ ಆಡುತ್ತಿರುವಾಗ, ನಮ್ಮನ್ನೆಲ್ಲಾ ಕರೆದು ಪೆಪ್ಪರಮೆಂಟು ಕೊಡುತ್ತಿದ್ದಳು. ಮೊದ ಮೊದಲು ಆಕೆಯ ಹತ್ತಿರ ಹೋಗಲು ಹೆದರುತ್ತಿದ್ದರೂ ಸಹ ಆಮೇಲೆ ಆಕೆಯನ್ನು ಕಂಡರೆ ಮಕ್ಕಳೆಲ್ಲರಿಗೂ ಇಷ್ಟವಾಗಿತ್ತು. ಅದಕ್ಕೆ ಅವಳು ಕೊಡುತ್ತಿದ್ದ ಕುರುಕಲು ತಿಂಡಿಗಳ ಆಮಿಷವೂ ಇರಬಹುದು. ಒಮ್ಮೊಮ್ಮೆ, ನಮಗೆ ಚಕ್ಕಲಿ-ಕೋಡುಬಳೆ, ಇತ್ಯಾದಿ ಇತ್ಯಾದಿಗಳ ನೈವೇದ್ಯವೂ ಸಹ ಆಗುತ್ತಿತ್ತು.

ಮಕ್ಕಳಿಗೆಲ್ಲರಿಗೂ ಆಪ್ತಳಾಗಿದ್ದಳು. ಮಕ್ಕಳೆಲ್ಲರೂ ಆಕೆಯ ಮನೆ ಮುಂದೆ ಆಡುತ್ತಿದ್ದುದನ್ನು ನೋಡಿ ಸಂತೋಷಪಡುತ್ತಿದ್ದಳು. ಯಾವುದೇ ದೂರು ಇಲ್ಲದೇ, ಪ್ರತಿ ದಿನ ಒಪ್ಪಿಕೊಂಡ ಮನೆಗಳಿಗೆ ಹೋಗಿ, ತನ್ನ ಕೆಲಸಗಳನ್ನು ಚಾಚೂ ತಪ್ಪದೇ ಮುಗಿಸುತ್ತಿದ್ದಳು. ಅದಕ್ಕೇ ಅನ್ಸುತ್ತೆ, ನಮ್ಮ ಮನೆಯ ಬೀದಿಯ ಹೆಂಗಸರಿಗೆ ಆಕೆಯ ಮೇಲೆ ಏನೋ ಒಂಥರಾ ಹೇಳಿಕೊಳ್ಳಲಾಗದ ಪ್ರೀತಿ. ಆಕೆಗೆ ದಣಿವೆಂಬುದು ಇತ್ತೋ ಇಲ್ವೋ? ಕೆಲಸ ಮುಗಿದ ಮೇಲೆ, ಇನ್ನೇನಾದರೂ ಇದೆಯಾ? ಇದ್ರೆ ಕೊಡಿ ಅಂತಾ ಕೇಳುತ್ತಿದ್ದಳು. ಬಹುಶಃ ಆಕೆ ರೈತನಿಗೆ ಹುಟ್ಟಿದ ಮಗಳೇ ಆಗಿರಬೇಕು (ಈಗಿನವರು ಅಲ್ಲ ಬಿಡಿ). ಕೇರಿಯ ಹೆಂಗಸರೆಲ್ಲರೂ ಸೇರಿಕೊಂಡು ಹರಟೆ ಹೊಡೆಯುವ ಸಮಯದಲ್ಲಿ ಆಕೆಯ ಬಗ್ಗೆ ವಿಷಯ ಬಂದಾಗ, ಚನ್ನಾಗಿ ಕೆಲಸ ಮಾಡುತ್ತಾಳೆ ಅನ್ನೋ ಕಾಂಪ್ಲಿಮೆಂಟ್ಸ್ ಗಳ ಜೊತೆಗೆ ಆಕೆ ಕಷ್ಟದಿಂದ ಬಂದ ಬಡವರ ಮಗಳೆಂದೂ, ಗಂಡ ಯಾವ ಕಾಲದಲ್ಲೋ ಸತ್ತು ಹೋಗಿದ್ದು, ಮಗ ವಿಪ್ರೋದಲ್ಲಿ ಪ್ರತಿ ತಿಂಗಳು ಲಕ್ಷಾಂತರ ದುಡಿಯುವ ಟೆಕ್ಕಿಯೆಂದೂ, ಲವ್ ಮ್ಯಾರೇಜ್ ಮಾಡಿಕೊಂಡನೆಂದೂ, ಸೊಸೆ ಬಂದ ಮೇಲೆ ಮಗ ಬದಲಾದನೆಂದೂ ಮಾತನಾಡಿಕೊಳ್ಳುತ್ತಿದ್ದರು. ಮಗನೇ ಆಕೆಯನ್ನು ಮನೆ ಬಿಟ್ಟು ಓಡಿಸಿದನೆಂದು ಗಾಸಿಪ್ ಮಾಡುತ್ತಿದ್ದರು. ಅಷ್ಟು ಶ್ರೀಮಂತರಾದರೂ ಈಕೆ ಇಲ್ಲಿಗೆ ಬಂದು ಒಬ್ಬಳ್ಯಾಕೆ ಇದ್ದಾಳೆ ಅನ್ನೋ ಪ್ರಶ್ನೆ ಕಾಡುತ್ತಿತ್ತು.

ಆದರೆ, ಅವತ್ತೊಂದಿನ ದೇವಸ್ಥಾನದ ಪೂಜಾರಪ್ಪ ದಿನಂಪ್ರತಿ ಆಕೆ ದೇವಸ್ಥಾನದ ಕಸ ಗುಡಿಸಿ, ಸಾರಿಸಿ, ರಂಗೋಲಿ ಇಡುವುದನ್ನು ಬೇಡವೆಂದಿದ್ದ. ಯಾಕೆ ಪೂಜಾರಪ್ಪ? ನಾನೇನು ಸರಿಯಾಗಿ ಕೆಲಸ ಮಾಡುತ್ತಿಲ್ಲವಾ? ಎಂದು ಕೇಳಿದ್ದಳು.. ಜಾತಿ ಗೀತಿ ಗೊತ್ತಿಲ್ಲದ ಈಕೆ ದೇವಸ್ಥಾನಕ್ಕೆ ದಿನಂಪ್ರತಿ ಕೆಲಸ ಮಾಡುವುದನ್ನು ಹಿಂದಿನ ದಿನದ ಕಮಿಟಿ ಮೀಟಿಂಗಿನಲ್ಲಿ ಕೆಲವರು ವಿರೋಧಿಸಿದ್ದರಂತೆ, ಆಕೆಗೆ ಕೊಟ್ಟಿದ್ದ ಮನೆಯನ್ನು ಒಂದು ವಾರದೊಳಗಾಗಿ ಖಾಲಿ ಮಾಡಿಸಬೇಕೆಂದು ತೀರ್ಮಾನಿಸಿದ್ದರಂತೆ, ಪೂಜಾರಪ್ಪನೂ ಸಹ ಇವಳ ಕಡೆಗೆ ವಾದ ಮಾಡಿದಾಗ, ಆತನನ್ನೇ ಬದಲಾಯಿಸಲು ಕಮಿಟಿ ಮುಂದಾದಾಗ ಆತ ಸುಮ್ಮನಿರಬೇಕಾಯಿತಂತೆ..

ಇಷ್ಟು ಹೇಳಿದ ನಂತರ ಪೂಜಾರಪ್ಪ ಹೆಚ್ಚೇನು ಮಾತನಾಡದೆ ಹೊರಟುಹೋಗಿದ್ದ. ಅವತ್ತು ಆಕೆ ದೇವಸ್ಥಾನದ ಮುಂದೆ ಇಡುತ್ತಿದ್ದ ರಂಗೋಲಿ ಅರ್ಧಕ್ಕೆ ನಿಂತುಹೋಗಿತ್ತು.. ಅವತ್ತಿನ ದಿನ ಆಕೆ ಸಪ್ಪೆ ಮೊರೆ ಹಾಕಿಕೊಂಡು ಕೆಲಸಕ್ಕೆ ಬಂದಾಗ, ಎಲ್ಲವನ್ನೂ ತಾನು ಕೆಲಸ ಮಾಡುತ್ತಿದ್ದ ಮನೆಯ ಒಡತಿಯರೊಂದಿಗೆ ಹಂಚಿಕೊಂಡಿದ್ದಳು. ಅವರೆಲ್ಲರೂ ಅಯ್ಯೋ ಪಾಪ ಎಂದು ಅನುಕಂಪ ತೋರಿಸಲಾಯ್ತೇ ಹೊರತು ಮತ್ತೇನೂ ಮಾಡಲು ಸಾಧ್ಯವಾಗಲಿಲ್ಲ..

ಮಾರನೇ ದಿನ ಆಕೆ ಕೆಲಸಕ್ಕೆ ಬರಲಿಲ್ಲ. ದೇವಸ್ಥಾನದ ಅಂಗಳವೂ ಸ್ವಚ್ಛವಾಗದೇ, ರಂಗೋಲಿಯಿಲ್ಲದೇ ಮುಖ ತೊಳೆಯದ ನನ್ನ ಮುಖದಂತಿತ್ತು. ಮಾರನೇ ದಿನ ಆಕೆ ಕೆಲಸಕ್ಕೆ ಬರದಾಗ, ಆಕೆ ಮನೆ ಬಿಟ್ಟು ಹೋಗಿರಬಹುದೇನೋ ಎಂಬ ಪ್ರಶ್ನೆಯನ್ನು ನಮ್ಮ ಬೀದಿಯ ಹೆಂಗಳೆಯರು ಮನಸ್ಸಿನಲ್ಲಿ ಹೊತ್ತುಕೊಂಡು ಚಡಪಡಿಸುತ್ತಿದ್ದರು. ನಮ್ಮಮ್ಮ ಆಕೆಯಿದ್ದ ಮನೆಗೆ ಬೀಗ ಹಾಕಿದೆಯೋ ಹೇಗೆ ಎಂದು ನೋಡಿಕೊಂಡು ಬರಲು ಹೇಳಿದಾಗ ಹೋಗಿ ನೋಡಿದರೆ, ಮನೆ ಒಳಗಿಂದ ಚಿಲಕ ಹಾಕಿತ್ತು. ಸಂಜೆಯಾದರೂ ಆ ಮನೆಯ ಬಾಗಿಲು ತೆರೆಯದೇ ಇದ್ದಾಗ, ದೇವಸ್ಥಾನದ ಪೂಜಾರಪ್ಪ ಆಕೆಯ ಮನೆ ಬಾಗಿಲು ಬಂದು ನಿಂತು ಬಾಗಿಲು ಬಡಿದ. ಕೇರಿಯ ಹುಡುಗರೆಲ್ಲರೂ ಪೂಜಾರಪ್ಪನ ಸುತ್ತ ನಿಂತುಕೊಂಡು, ಆಕೆ ಬಾಗಿಲು ತೆಗೆಯುವುದನ್ನು ನೋಡುತ್ತಿದ್ದರು. ಆಕೆ ಬಾಗಿಲು ತೆಗೆಯಲೇ ಇಲ್ಲ. ಪೂಜಾರಪ್ಪ ಬಾಗಿಲು ಮುಂದೂಡಿದಾಗ, ಬಾಗಿಲು ತೆರೆದುಕೊಂಡಿತು. ಆಕೆ ಹಾಸಿಗೆ ಮೇಲೆ ಮಲಗಿಕೊಂಡಿದ್ದಳು. ಖೊರ ಖೊರ ಕೆಮ್ಮುತ್ತಿದ್ದುದು ಆಕೆಗೆ ಹುಶಾರು ಇಲ್ಲದೇ ಇದ್ದುದಕ್ಕೆ ಸಾಕ್ಷಿಯಾಗಿತ್ತು. ಸುಸ್ತಾದಂತೆ ಕಾಣುತ್ತಿದ್ದಳು. ಪೂಜಾರಪ್ಪ ಆಕೆಯೊಂದಿಗೆ ಏನೋ ಮಾತಾಡಿ ಮತ್ತೆ ಬಾಗಿಲು ಮುಂದು ಮಾಡಿಕೊಂಡು ಬಂದ. ನಮಗೇನೂ ಅರ್ಥವಾಗಲಿಲ್ಲ. ಸ್ವಲ್ಪ ಹೊತ್ತಿನ ನಂತರ ಪೂಜಾರಪ್ಪ ಮೆಡಿಕಲ್ ಶಾಪ್ ನಿಂದ ಯಾವುದೋ ಮಾತ್ರೆಗಳನ್ನು ತಂದುಕೊಟ್ಟಿದ್ದ.

ಮಾರನೇ ದಿನದ ಮಧ್ಯಾನ್ಹದ ಹೊತ್ತಿನಲ್ಲಿ ಆಕೆ ನಮ್ಮ ಮನೆ ಕೆಲಸಕ್ಕೆ ಬಂದಿದ್ದಳು. ಲವಲವಿಕೆಯಿಂದ ಓಡಾಡುತ್ತಿದ್ದಳು. ನಗುನಗುತ್ತಾ ಕೆಲಸ ಮಾಡುತ್ತಿದ್ದಳು. ಅವತ್ತೇ ಆಕೆ ಅಷ್ಟೊಂದು ನಗು ನಗುತ್ತಾ ಕೆಲಸ ಮಾಡುತ್ತಾ ಲವಲವಿಕೆಯಿಂದ ಇದ್ದುದು. ಇಷ್ಟು ದಿನ ನಮ್ಮಲ್ಲಿ ಕೆಲಸ ಮಾಡುತ್ತಿದ್ದವಳು ಈಕೇನಾ ಅನ್ನಿಸುತ್ತಿತ್ತು. ಅವಳ ನಾಲ್ಕಾಣೆ ಬಿಲ್ಲೆ ಕುಂಕುಮ, ಕರಿಮಣಿ ಸರ ಅದಕ್ಕೆ ಚಿನ್ನದ ಮಾಂಗಲ್ಯ ಅವತ್ತು ಯಾಕೋ ಏನೋ ಪ್ರಕಾಶಿಸುತ್ತಿತ್ತು.

ಸಂಜೆ ಹೊತ್ತು ಮಕ್ಕಳೆಲ್ಲರಿಗೂ ಕರೆದು ಎಲ್ಲರಿಗೂ ಕೈತುಂಬಾ ತಿಂಡಿಗಳನ್ನು ಕೊಟ್ಟಿದ್ದಳು. ಎಲ್ಲರಿಗೂ ಅವತ್ತು ಹಬ್ಬ. ಅವತ್ತು ಬಹಳ ಹೊತ್ತು ದೇವಸ್ಥಾನದ ಮುಂದೆ ಇದ್ದ ಅರಳಿ ಕಟ್ಟೆಯ ಮೇಲೆ ಕೂತುಕೊಂಡು ಮಕ್ಕಳ ಆಟವನ್ನು ನೋಡುತ್ತಿದ್ದಳು. ಬಹಳ ಹೊತ್ತು ಅಲ್ಲಿಯೇ ಕುಳಿತುಕೊಂಡಿದ್ದಳು. ರಾತ್ರಿ 9.00 ಕ್ಕೆ ನಾನು ಅಂಗಡಿಗೆ ಹೋಗಿ ಬರುವಾಗ ಆಕೆ ಅಲ್ಲೇ ಕುಳಿತುಕೊಂಡಿದ್ದಳು. ಅವಳನ್ನು ನೋಡಿ, ಮುಗುಳ್ನಗೆ ಬೀರಿದೆ. ಪ್ರತಿಯಾಗಿ ಅವಳೂ ಮುಗುಳ್ನಗೆ ಬೀರಿದಳು.

ಅವತ್ತು ರಾತ್ರಿಯೆಲ್ಲಾ ಅರಳಿ ಕಟ್ಟೆಯ ಮೇಲೆ ಕುಳಿತುಕೊಂಡಿದ್ದಳು ಅನ್ಸುತ್ತೆ. ಬೆಳಿಗ್ಗೆ ಎಂದಿನಂತೆ 6ಕ್ಕೆ ಟ್ಯೂಶನ್ ಗೆ ಹೋಗುವಾಗ ಆಕೆ ಇನ್ನೂ ಅರಳಿಕಟ್ಟೆ ಮೇಲೆ ಮಲಗಿಕೊಂಡಿದ್ದಳು. ಅವತ್ತು ಭಾನುವಾರ. ಸುಮಾರು 10 ಗಂಟೆಗೆ ಕೇರಿಯ ಹುಡುಗರೆಲ್ಲರೂ ಆಕೆಯ ಕಡೆಗೆ ಹೋದಾಗ, ಪೂಜಾರಪ್ಪ ಅಲ್ಲೇ ನಿಂತಿದ್ದ. ಆಕೆಯು ಏಳದೇ ಇನ್ನೂ ಮಲಗಿಕೊಂಡಿದ್ದಳು. ಅವಳನ್ನು ಮುಟ್ಟಬೇಡಿ ಅಂತಾ ಪೂಜಾರಪ್ಪ ಹೇಳಿದ. ಯಾಕೆ ಅಂತಾ ಗೊತ್ತಾಗಲಿಲ್ಲ. ಆತ ನಮ್ಮನ್ನು ಅಲ್ಲಿಂದ ಓಡಿಸಿಬಿಟ್ಟ. ಮಧ್ಯಾನ್ಹದ ಹೊತ್ತಲ್ಲಿ ಬೀದಿಯ ಹೆಂಗಳೆಯರೆಲ್ಲರೂ ಸೇರಿ ಮಾತನಾಡುತ್ತಿದ್ದರು. ಅವರ ಮಾತಿನಿಂದ ತಿಳಿಯುತ್ತಿತ್ತು.. ಆ ಹೆಂಗಸು ರಾತ್ರಿ ಮಲಗಿದ್ದಾಗ, ಅಲ್ಲಿಯೇ ಸತ್ತು ಹೋಗಿದ್ದಳು. ಆಕೆಗೆ ಹುಶಾರಿಲ್ಲದಾಗ, ಪೂಜಾರಪ್ಪ ಆಕೆಯ ಮಗನಿಗೆ ಫೋನ್ ಮಾಡಿ ವಿಷಯ ತಿಳಿಸಿದನಂತೆ, ಆಕೆಯ ಮಗ, ಅವಳು ಒಂದು ವರ್ಷದ ಹಿಂದೆಯೇ ನನ್ನ ಪಾಲಿಗೆ ಸತ್ತು ಹೋಗಿದ್ದಾಳೆ ಅಂದಿದ್ದನಂತೆ.. ಅದಕ್ಕೆ ಅವಳು ಮನಸ್ಸಿಗೆ ತುಂಬಾನೇ ನೋವು ಮಾಡಿಕೊಂಡಿದ್ದಳಂತೆ...ತಾನೇನಾದರೂ ಸತ್ತು ಹೋದರೆ, ಅವನಿಗೆ ಹೇಳಬೇಡಿ ಅಂದಳಂತೆ. ಪಾಪ, ತಾಯಿ ಮನಸ್ಸು ಎಷ್ಟುಂದು ಸಂಕಟಪಟ್ಟಿತ್ತೋ ಈ ಮಾತನ್ನು ಹೇಳಲು..

ಆಕೆ ಸತ್ತ ವಿಷಯ ಒಬ್ಬರಿಂದ ಇನ್ನೊಬ್ಬರಿಗೆ ಹರಡಿ, ಕೇರಿಯ ಹುಡುಗರೆಲ್ಲಾ ಆಕೆಯ ಹೆಣದ?? ಸುತ್ತ ನೆರೆದೆವು. ಆಗ ಮತ್ತೆ ಎಂಟ್ರಿ ಕೊಟ್ಟ ಪೂಜಾರಪ್ಪ ನಮ್ಮನ್ನೆಲ್ಲಾ ದೂರ ಸರಿಸಿದ. ಆಕೆಯ ಸುತ್ತಲೂ ತನ್ನ ಕೈನ ಪ್ಲಾಸ್ಟಿಕ್ ಕವರ್ ನಲ್ಲಿ ತಗೊಂಡು ಬಂದಿದ್ದ ಬಿಳಿ ಪುಡಿಯನ್ನು ರಂಗೋಲಿ ಇಟ್ಟ ಹಾಗೆ ಇಟ್ಟ. ಇದ್ಯಾಕೆ ಪೂಜಾರಪ್ಪ ಅಂತಾ ಕೇಳಿದಾಗ, ಆಕೆಗೆ ಇರುವೆ ಮುತ್ತುತ್ತಿರುವುದನ್ನು ತೋರಿಸಿದ. ಅದನ್ನು ಮನೆಗೆ ಬಂದು ಅಮ್ಮನ ಎದುರು ಬಂದು ಹೇಳಿದಾಗ ಆಕೆ ಮತ್ತೆ ನೀನು ಅಲ್ಲಿಗೆ ಹೋಗಬೇಡವೆಂದು ತಾಕೀತು ಮಾಡಿದಳು. ನಮ್ಮ ದುಗುಡ ಆಕೆಗೆ ಅರ್ಥವಾಗಲಿಲ್ಲ. ನಮ್ಮ ಬೀದಿಯ ಹೆಂಗಸರ್ಯಾರೂ ಈ ಬಗ್ಗೆ ತಲೆ ಕೆಡಿಸಿಕೊಳ್ಳಲಿಲ್ಲ. ಆದರೂ ಅವರ ಮುಖದಲ್ಲಿ ಅವರ ಮನಸ್ಸಿನಲ್ಲಿ ಹೇಳಿಕೊಳ್ಳಲಾಗದ ಯಾವುದೋ ಚಡಪಡಿಕೆ, ಒದ್ದಾಟ ಕಾಣುತ್ತಿತ್ತು.


ಸಂಜೆ ಐದಾಗುತ್ತಿತ್ತು. ಆಕೆಯ ಸುತ್ತ ಪೂಜಾರಪ್ಪ ಹಾಕಿದ್ದ ಬಿಳಿ ಬಣ್ಣದ ಪೌಡರಿನ ಲಕ್ಷ್ಮಣ ರೇಖೆಯನ್ನು ದಾಟಿ, ಇರುವೆಗಳು ಆಕೆಯನ್ನು ಮುತ್ತಿಕೊಳ್ಳುತ್ತಿದ್ದವು. ಪೂಜಾರಪ್ಪ ಪೊರಕೆ ಹಿಡಿದು, ಇರುವೆಗಳನ್ನೆಲ್ಲಾ ಕಸ ಗುಡಿಸಿ, ದೂರ ಸರಿಸಿದ. ಒಂದೆರಡು ಕ್ಷಣಗಳಲ್ಲಿ ಅರಳೀ ಕಟ್ಟೆಯ ಮುಂದೆ ಮುನ್ಸಿಪಾಲ್ಟಿಯ ಟ್ರ್ಯಾಕ್ಟರ್ ಬಂದು ನಿಂತಿತ್ತು, ಅದರಲ್ಲಿದ್ದ ಇಬ್ಬರು ಖಾಕಿಧಾರಿ ಮುದುಕರಿಬ್ಬರೂ ಅಲ್ಲಿಯೇ ನಿಂತಿದ್ದ ಪೂಜಾರಪ್ಪನ ಹತ್ತಿರ ಒಂದಿಷ್ಟು ವ್ಯಾಪಾರ ಕುದುರಿದ ಮೇಲೆ, ಒಂದೆರಡು ಕ್ಷಣ ಇಬ್ಬರೂ ಬೀಡಿ ಸೇದುತ್ತಾ ಅದು ಇದು ಮಾತಾಡಿಕೊಂಡರು, ಪೂಜಾರಪ್ಪ ಮನೆಗೆ ಹೋಗಿ ಬಂದು, ಒಂದಿಷ್ಟು ದುಡ್ಡನ್ನು ಕೊಟ್ಟ ಮೇಲೆ, ಒಂಥರಾ ವಿಚಿತ್ರ ನಗುವಿನೊಂದಿಗೆ ಕಿಸೆಗಿಳಿಸಿಕೊಂಡು, ಅರ್ಧ ಸೇದಿದ್ದ ಬೀಡಿಯನ್ನು ಹೊಸಕಿ ಹಾಕಿ, ಆಕೆಯ ಹೆಣವನ್ನು ಇಬ್ಬರೂ ಸೇರಿ ಎತ್ತಿ ಮುನಿಸಿಪಾಲ್ಟಿ ಟ್ರ್ಯಾಕ್ಟರ್ ಗೆ ತುಂಬಿದ್ದರು. ಅರ್ಧ ಕಸ ತುಂಬಿದ್ದ ಟ್ರ್ಯಾಕ್ಟರ್ ನ ಒಂದು ಮೂಲೆಯಲ್ಲಿ ಆಕೆಯ ಹೆಣವನ್ನು ಮಲಗಿಸಿ, ಗೋಣೀಚೀಲ ಹೊದ್ದಿಸಿದರು. ಒಂದೆರಡು ಕ್ಷಣಗಳಲ್ಲಿ ಟ್ರ್ಯಾಕ್ಟರ್ ಜಾಗ ಖಾಲಿ ಮಾಡಿತ್ತು. ಅವತ್ತೆಲ್ಲಾ ಏನೋ ಒಂಥರಾ ಭಾವ ಮನೆ ಮಾಡಿತ್ತು. ಯಾಕೋ ಏನೋ ಯಾರಿಗೂ ಆಟ ಆಡಲು ಮನಸ್ಸಾಗಲಿಲ್ಲ..

ಅವತ್ತು ರಾತ್ರಿ ಜೋರಾಗಿ ಮಳೆ ಬಂದಿತ್ತು. ಯಾಕೆ ಅಂತಾ ಗೊತ್ತಾಗಲಿಲ್ಲ.. ಬೆಳಿಗ್ಗೆಯಾಗುವಷ್ಟರಲ್ಲಿ ಆಕೆಯಿದ್ದ ಮನೆ ಕೂಡಾ ಬಿದ್ದು ಹೋಗಿತ್ತು.. ಅದೂ ಸಹ ಯಾಕೆ ಅಂತಾ ಗೊತ್ತಾಗಲಿಲ್ಲ.

(ಕಲ್ಪನೆ..)

ಇಂತಿ,
ಯಳವತ್ತಿ

10 comments:

nimmolagobba said...

ಈ ಕಥೆಗೆ ಶೀರ್ಷಿಕೆ ಅಗತ್ಯ ವಿಲ್ಲ !!! ಮನ ಮಿಡಿಯುವ ಎಲ್ಲಿ ಬೇಕಾದರೂ ನಡೆದಿರ ಬಹುದಾದ ನಿಮ್ಮ ಕಾಲ್ಪನಿಕ ಕಥೆ ಹಲವರ ಬಾಳಿನಲ್ಲಿ ನಿಜವಾಗಿರುತ್ತದೆ.ನಾನು ಸಹ ಇಂಥಹ ಸನ್ನಿವೇಶ ಎದುರಿಸಿದ ಹಲವು ವ್ಯಕ್ತಿಗಳನ್ನು ಕಂಡಿದ್ದೇನೆ. ಒಟ್ಟಿನಲ್ಲಿ ನಿಮ್ಮ ಕಾಲ್ಪನಿಕ ಕಥೆ ಚೆನ್ನಾಗಿದೆ.ನಿಮಗೆ ಥ್ಯಾಂಕ್ಸ್.

ಶಿವಶಂಕರ ವಿಷ್ಣು ಯಳವತ್ತಿ said...

@ ಬಾಲು ಸರ್.

ನಿಮ್ಮ ಅಭಿಪ್ರಾಯಕ್ಕೆ ಧನ್ಯವಾದಗಳು. ನಮ್ಮಲ್ಲಿ ಈಗ ಸಾವಿರಾರು ಟೆಕ್ಕಿಗಳಿದ್ದಾರೆ. ಈ ಒಂದು ಕಥೆಯನ್ನು ಓದಿದರೆ, ಅವರ ಮನಸ್ಸಿನಲ್ಲಿ ಒಂಚೂರು ಏನಾದರೂ ಅನ್ನಿಸಿದರೆ, ನಾನು ಬರೆದಿದ್ದು ಸಾರ್ಥಕ.

ಇಂತಿ,
ಯಳವತ್ತಿ

Subbu Sullia said...

ಮನ ಮಿಡಿಯುವ ಕಥೆ ,
materialistic ಜಗತ್ತಿನ , ವ್ಯಥೆ :(

" said...

ಶಿವು,

ನಿಜಕ್ಕೂ ಅಮೋಘ ಕಲ್ಪನೆ. ಶೀರ್ಷಿಕೆ ಕೊಟ್ಟು ಅಂಕಣದ ಹರವನ್ನ ಸೀಮಿತಗೊಳಿಸಬೇಡಿ. ಎಲ್ಲಾದರಲ್ಲಿ ನೆಡೆದಿರಬಹುದಾದ ಘಟನೆಯೇ... ಆದರೆ ತ್ಯಾಗವೇ ಮೂರ್ತಿವೆತ್ತಂತೆ ಬಾಳಿ ಬದುಕಿದ ಅವರಿಗೆ, ಬದುಕುತ್ತಿರುವ ಅವರಂಥವರಿಗೆ ನಿಜಕ್ಕೂ ನನ್ನ ನಮನಗಳು.

ಓದಿದ ನಂತರ ಯಾಕೋ ಮನಸ್ಸು ಬೇಡವೆಂದರೂ ಹಿಡಿತಕ್ಕೆ ಸಿಗುತ್ತಿಲ್ಲ...

sunaath said...

ದೊಡ್ಡವರ ವ್ಯವಹಾರಗಳು ಮುಗ್ಧ ಬಾಲಕರಿಗೆ ವಿಚಿತ್ರವಾಗಿ ಕಾಣುತ್ತವೆ. ಮನ ಮಿಡಿಯುವ ಕತೆ ಹೆಣದಿದ್ದೀರಿ.

ಶಿವಶಂಕರ ವಿಷ್ಣು ಯಳವತ್ತಿ said...

@ ಸುಬ್ಬು ಸರ್..

ನಿಮ್ಮ ಅಭಿಪ್ರಾಯಕ್ಕೆ ಧನ್ಯವಾದಗಳು. ನಿಜವಾಗಲೂ ಈ ಥರಾ ಘಟನೆಗಳು ನಡೆಯುತ್ತಿರುತ್ತವೆ.

ಇಂತಿ,
ಯಳವತ್ತಿ
www.shivagadag.blogspot.com

ಶಿವಶಂಕರ ವಿಷ್ಣು ಯಳವತ್ತಿ said...

@ ಅವೀನ್ ಕುಮಾರ್ ಸರ್..

ಕನಿಷ್ಟ ಒಬ್ಬರ ಮನ ಮಿಡಿದರೆ, ನಾನು ಬರೆದಿದ್ದು ಸಾರ್ಥಕ.... ನಿಮ್ಮ ಅಭಿಪ್ರಾಯಕ್ಕೆ ಧನ್ಯವಾದಗಳು..

ಇಂತಿ,
ಯಳವತ್ತಿ

ಶಿವಶಂಕರ ವಿಷ್ಣು ಯಳವತ್ತಿ said...

@ ಸುನಾಥ ಕಾಕ..

ನಿಮ್ಮ ಅಭಿಪ್ರಾಯಕ್ಕೆ ಧನ್ಯವಾದಗಳು. ಒಂದು ಚಿಕ್ಕ ಪ್ರಯತ್ನ ಮಾಡಿದ್ದೇನೆ. ನಿಮ್ಮ ಆಶೀರ್ವಾದ ಇರಲಿ.

ಇಂತಿ,
ಯಳವತ್ತಿ

Umesh Balikai said...

ಶಿವು,

ನಿಜಕ್ಕೂ ತುಂಬಾ ಚೆನ್ನಾಗಿದೆ ಕಣ್ರೀ... ತುಂಬಾ ಅಂದ್ರೆ ತುಂಬಾನೆ ಇಷ್ಟ ಆಯ್ತು... ಧನ್ಯವಾದಗಳು.

ಶಿವಪ್ರಕಾಶ್ said...

lifu istenu shivu... :(