ಖಾಯಂ ಓದುಗರು..(ನೀವೂ ಸೇರಬಹುದು)

24 July 2009

ಬ್ಲಾಗಿಗೆ ಬೀಗ ಹಾಕಬೇಕಾಗಿದೆ...
ಎಂದೂ ಇಲ್ಲದ ಖಿನ್ನತೆ ಉಂಟಾಗಿದೆ. ಈ ಬಾರಿ ಖಿನ್ನತೆಯು ನನ್ನನ್ನು ಬಿಟ್ಟು ಹೋಗಲಾರದೇನೋ ಎಂದೆನಿಸಿದೆ. ಯಾವುದಕ್ಕೂ ಮನಸ್ಸಿಲ್ಲ. ಊಟ ತಿಂಡಿಗಳೂ ಸೇರುತ್ತಿಲ್ಲ. ಬಿಯರು ವಿಸ್ಕಿಗಳೇ ಅಸಹ್ಯವಾಗಿವೆ. ನನ್ನೊಳಗೆ ನಾ ಕಳೆದುಹೋಗಿದ್ದೇನೆ. ಯಾವುದೂ ಇಷ್ಟವಾಗುತ್ತಿಲ್ಲ.

ಎಸ್ಸೆಮ್ಮೆಸ್ಸುಗಳೆಂದರೆ, ಪ್ರಾಣ ಬಿಡುತ್ತಿದ್ದ ನನಗೆ ಇನ್ ಬಾಕ್ಸಿನಲ್ಲಿ ಬಂದಿರುವ ಮೆಸೇಜುಗಳನ್ನು ತೆಗೆದು ನೋಡಲಾಗುತ್ತಿಲ್ಲ. ಬೆಳಿಗ್ಗೆ ೫ ಕ್ಕೆ ಎದ್ದು ಪ್ರಾಣಾಯಾಮಾ ಕಲಿಯಲು ಹೋಗುತ್ತಿದ್ದ ಮನಸ್ಸು ಇಲ್ಲವಾಗಿದೆ. ಮೈ ತುಂಬಾ ಸೋಮಾರಿತನ ತುಂಬಿಕೊಂಡಿದೆ. ವ್ಯಾಯಾಮ ಶಾಲೆಯ ರಸ್ತೆಯಲ್ಲಿ ಹೋಗಲಾಗುತ್ತಿಲ್ಲ. ಕದ್ದು-ಮುಚ್ಚಿ ಬೇರೆ ದಾರಿಯಲ್ಲಿ ತಿರುಗುತ್ತಿದ್ದೇನೆ. ವ್ಯಾಯಾಮ ಶಾಲೆಯ ಸ್ನೇಹಿತರು ಮಾಡುತ್ತಿರುವ ಫೋನ್ ಕಾಲ್ ಗಳನ್ನು ರಿಸೀವ್ ಮಾಡ್ತಾ ಇಲ್ಲ. ಚಾಟಿನಲ್ಲಿ ಸಿಕ್ಕ ಗೆಳೆಯರಿಗೆ ಒಂದು ಹಾಯ್ ಹೇಳಿಲ್ಲ. ಆರ್ಕುಟ್ ನಲ್ಲಿ ಸ್ಕ್ರ್ಯಾಪ್ ಮಾಡಿದವರಿಗೆ ಉತ್ತರಿಸಲಾಗುತ್ತಿಲ್ಲ.

ಕೆಲಸ ಮಾಡಲು ಆಸಕ್ತಿ ಇಲ್ಲ. ಅಪಘಾತವಾದ ಮೇಲೆ ಬೈಕನ್ನು ರಿಪೇರಿ ಮಾಡಿಸಿಲ್ಲ. ಗ್ಯಾಸ್ ಸಿಲಿಂಡರ್ ವರ್ಗಾವಣೆ ಮಾಡಿಸಿಲ್ಲ. ತಂಗಿಗೆ ಅಪ್ಲಿಕೇಶನ್ ಹಾಕಲು ಆದಾಯ ಮತ್ತು ಜಾತಿ ಪ್ರಮಾಣ ಪತ್ರ ಮಾಡಿಸಿಲ್ಲ. ಕರೆಂಟ್ ಬಿಲ್ ಕಟ್ಟಿಲ್ಲ. ಮನೆ ಬಾಡಿಗೆ ಕೊಟ್ಟಿಲ್ಲ. ಫೋನ್ ಬಿಲ್ ಕಟ್ಟಿಲ್ಲ.... ದಿನಾ ಬೆಳಿಗ್ಗೆ ಎದ್ದು ಕಂಪ್ಯೂಟರ್ ಆನ್ ಮಾಡಿ, ಆನ್ ಲೈನ್ ಆಗುತ್ತಿದ್ದ ನನಗೆ ಕಂಪ್ಯೂಟರ್ ಆನ್ ಮಾಡಲು ಮನಸ್ಸಿಲ್ಲ. ಜೇಬಲ್ಲಿ ದುಡ್ಡಿಲ್ಲ. ಎಲ್ಲಾದರೂ ಸ್ವಲ್ಪ ದಿನ ಹೊರಗೆ ಹೋಗೋಣ ಅಂದರೆ, ರಜೆ ಕೊಡೋದಿಲ್ಲ.

ನನ್ನ ಪ್ರಾಣ "ಮಮ್ಮಿ-ನಾಗರಾಜ್ " ಗೆ ಫೋನ್ ಮಾಡಿಲ್ಲ.......................... ಬರೀ ಇಲ್ಲಗಳೇ ತುಂಬಿಕೊಂಡಿವೆ..


ಎಷ್ಟು ತಲೆ ಕೆಡಿಸಿಕೊಂಡರೂ.. ಕಾರಣಗಳನ್ನು ಹುಡುಕಲಾಗುತ್ತಿಲ್ಲ. ಸುಮಾರು ೧೦-೧೫ ದಿನವಾಯಿತು. ಏನೂ ಮಾಡಲಾಗುತ್ತಿಲ್ಲ.


ತುಂಬಾ ಇಷ್ಟವಾಗುತ್ತಿದ್ದ ರವಿ ಬೆಳಗೆರೆಯವರ ಬರಹಗಳಲ್ಲಿ " ದಿ ಗಾಡ್ ಫಾದರ್" ಕಾದಂಬರಿ ಓದಿ, ಭಯಂಕರವಾದ ಕೋಪ ಬಂದಿದೆ. ಆಂಗ್ಲ ಕಾದಂಬರಿಕಾರ ಮಾರಿಯೋ ಪೂಜೋ ಬರೆದ ಗಾಡ್ ಫಾದರ್ ಕಾದಂಬರಿಯನ್ನು ಈ ಮೊದಲೇ (೧೯೯೪ ರಲ್ಲಿ) ಚಿಕ್ಕನಾಯಕನಹಳ್ಳಿಯ ಎಂ.ವಿ. ನಾಗರಾಜರಾವ್ ರವರು ಅದೇ ಹೆಸರಿನಲ್ಲಿ ಕನ್ನಡಕ್ಕೆ ಅನುವಾದ ಮಾಡಿದ್ದಾರೆ..(ಸುಧಾ ವಾರಪತ್ರಿಕೆಯಲ್ಲಿ ಧಾರವಾಹಿಯಾಗಿ ಪ್ರಕಟಗೊಂಡಿದೆ) ಅಂಥದನ್ನು 2005ರಲ್ಲಿ ರವಿ ಬೆಳಗೆರೆ ರವರು 'ದಿ ಗಾಡ್ ಫಾದರ್' ಅಂತಾ ಬರೆದು ಪ್ರಕಟಿಸಿದ್ದಾರೆ. ಈ ಎರಡೂ ಪುಸ್ತಕದಲ್ಲಿ ನನಗೆ ಅಷ್ಟೇನೂ ವ್ಯತ್ಯಾಸ ಕಾಣಲಿಲ್ಲ... ಓದಿದ ಮೇಲೆ ನನಗೆ ನನ್ನ ಮೇಲೇ ಕೋಪ ಬಂದಿದೆ..ಕಾದಂಬರಿಯನ್ನು ಓದಿದ್ದಕ್ಕೆ.


ನಾ ಯಾವತ್ತಿದ್ದರೂ ಆತ್ಮ ಕಥೆಗಳಲ್ಲಿ ವಿಶ್ವಾಸ ಇಡುವುದಿಲ್ಲ. ಅದರಲ್ಲಿ ಸತ್ಯವೇ ಇರುತ್ತದೆಂದು ನಾವು ಹೇಗೆ ನಂಬುವುದು? ಪ್ರಪಂಚದಲ್ಲಿ ಸಾವಿರಾರು ಜನರು ತಮ್ಮ ಆತ್ಮಕಥೆಗಳನ್ನು ಬರೆದುಕೊಂಡಿದ್ದಾರೆ,.. ಅವರೆಲ್ಲಾ ಬರೆದಿರುವುದು ಸತ್ಯವಾ...???

ಈ ಕುರಿತು ಒಂದು ಬ್ಲಾಗಿನ ಬರವಣಿಗೆ ಬಗ್ಗೆ ಆ ಬ್ಲಾಗಿಗರೊಂದಿಗೆ ಸಣ್ಣದಾಗಿ ಜಗಳದ ತರಹದ್ದೊಂದು ಆಡಿದೆ...

ಈ ಮಧ್ಯೆ ಖಿನ್ನತೆ ನನ್ನನ್ನು ಆವರಿಸಿಕೊಂಡಿದೆ. ಒಂದಷ್ಟು ದಿನ ಎಲ್ಲಾದರೂ ಹೋಗಿಬಿಡಬೇಕು. ಎಲ್ಲಾ ಸಂಬಂಧಗಳನ್ನು ಕ್ಷಣ ಕಾಲ ಕಡಿದುಕೊಳ್ಳಬೇಕು ಅಂತಾ ಅನ್ನಿಸಿದೆ. ಖಿನ್ನತೆಯಲ್ಲಿ ಸ್ವಲ್ಪ ಮುಳುಗಬೇಕು. ಈ ಖಿನ್ನತೆಯಲ್ಲೇ ನಮ್ಮ ಹಿಂದಿನ ತಪ್ಪುಗಳು ನೆನಪಾಗುವುದು.. ತಪ್ಪುಗಳಿಂದ ಕಲಿತ ಪಾಠಗಳ ಮೆಲುಕು ಹಾಕಬಹುದು..

ಈ ಅವಧಿಯಲ್ಲಿ ತುಂಬಾ ಕಾಡಿಸೋದು ಕಳೆದುಹೋದವರ ನೆನಪುಗಳು. ಅವರು ಇದ್ದಿದ್ದರೆ ಎಷ್ಟು ಚನ್ನಾಗಿರ್ತಿತ್ತು ?? ಅಪ್ಪ ಇದ್ದಿದ್ದರೆ.., ಅಂತಾ ಅನ್ನಿಸಿಬಿಟ್ಟಿದೆ. ನನ್ನೊಬ್ಬನನ್ನೆ ಸಿಲುಕಿಸಿ, ಎಲ್ಲರಿಂದ ದೂರ ಹೋಗಿಬಿಟ್ಟ.... ಖಿನ್ನತೆ ಆವರಿಸಿದಾಗ, ಮೊದಲು ನೆನಪಾಗೋದು ಅಪ್ಪ..ನೆನಪಾದಾಗಲೆಲ್ಲಾ ನೆನಪಾಗೋದು ಈ ಹಾಡು...

ಖಿನ್ನತೆಯಲ್ಲಿರುವುದು...........ಅಪ್ಪ.. ಆ ಕಳೆದುಹೋದ ನೆನಪುಗಳು.. ಕಳೆದು ಹೋದ ಹಾಡುಗಳು...ಸಮಯ..ಅವಳು.... ಮತ್ತು ನಾನು.......ಅವಳು ಮತ್ತೊಮ್ಮೆ ನೆನಪಾಗಿದ್ದಾಳೆ..........
ಬೇಡ ಬೇಡವೆಂದರೂ ಬಂದು ಕಣ್ಣ ಮುಂದೆ ನಿಲ್ಲುತ್ತಿವೆ.. ಅದಕ್ಕಾಗಿ, ಖಿನ್ನತೆ ಕಳೆಯುವವರೆಗೆ ಬ್ಲಾಗಿಗೆ ಮತ್ತು ಆರ್ಕುಟ್ ಗೆ ಬೀಗ ಹಾಕುತ್ತಿದ್ದೇನೆ.......ನಿಮ್ಮನ್ನೆಲ್ಲಾ ಮಿಸ್ ಮಾಡಿಕೊಳ್ಳುತ್ತಿದ್ದೇನೆ.............

ನಿಮಗಾಗಿ ಹಾಡುಗಳು......
೧) ತಾಜ್ ಮಹಲ್
೨) ಕಾರಂಜಿ ( http://www.123musiq.com/SOURCE/kannada/Kaaranjji/Yaaru%20Haadada%20-%20Hariharan.mp3 )
೩) ಗುಣವಂತ
೪) ಗಾಳಿಪಟ
೫) ಅಮೇರಿಕಾ ಅಮೇರಿಕಾ
೬) ಆಕ್ಸಿಡೆಂಟ್
೭) ಗಂಡ-ಹೆಂಡತಿ
೮) ಸಜನಿ
೯) ಆಟೋಗ್ರಾಫ್
೧೦) ಬಡವರ ಬಂಧು
೧೧) ಶ್ರೀನಿವಾಸ ಕಲ್ಯಾಣ
೧೨) ನಾಗಮಂಡಲ
೧೩) ಸಂತ ಶಿಶುನಾಳ ಷರೀಫ
೧೪) ಮುಸ್ಸಂಜೆ ಮಾತು


ಇಂತಿ ನಿಮ್ಮ ಪ್ರೀತಿಯ,

ಶಿವಶಂಕರ ವಿಷ್ಣು ಯಳವತ್ತಿ

7 comments:

Guest said...

ನಿಮ್ಮ ಬ್ಲಾಗ್ ಓದಿ ತುಂಬ ನೋವಾಯಿತು. ನಿಮ್ಮ ಕಿನ್ನತೆಯನ್ನು ಹೇಗೆ ಹೋಗಲಾಡಿಸುವುದು?ಕಾರಣ ತಿಳಿಯದೆ ಏನನ್ನು ಹೇಳಲು ಸಾದ್ಯವಿಲ್ಲ ಅಲ್ವೇ? ಹಾಗೆಂದು ಕಾರಣ ಕೇಳಲು ಆಗೋದಿಲ್ಲ. ಅದು ನಿಮ್ಮ ಸ್ವಂತ ವಿಷಯ ಅಲ್ವ?
ನನಗೂ ಕೆಲವೊಮ್ಮೆ ಹಾಗೆ ಆಗುತ್ತೆ. ಎಲ್ಲರನ್ನು ತೊರೆದು ದೂರ ಹೋದರೆ ಕಿನ್ನತೆ ಇನ್ನು ಹೆಚ್ಚಾಗುತ್ತೆ ಅಲ್ವೇ?
ನಿಮ್ಮ ಮನಸನ್ನು ಬೇರೆ ವಿಷಯದೆಡೆಗೆ ಬದಲಾಯಿಸಿ. ಆದ್ದರಿಂದ ನಿಮ್ಮ ಮನಸಿನಲ್ಲಿರಿರುವ ವಿಷಯವನ್ನು ನಿಮಗೆ ತುಂಬಾ ಹತ್ತಿರದವರೊಂದಿಗೆ ಹಂಚಿಕೊಳ್ಳಿ. ಆಗ ಸ್ವಲ್ಪ ಮಟ್ಟಿಗಾದರೂ ಕಿನ್ನತೆ ದೂರಾಗಬಹುದು. ನೀವು ಸ್ವಲ್ಪ ದಿನ ನಮ್ಮಿಂದ ದೂರಾದರೆ ನಮಗೆ ತುಂಬ ಬೇಜಾರು ಆಗುತ್ತೆ. ನಿಮ್ಮ ಕಿನ್ನತೆ ನಮ್ಮನ್ನು ಆವರಿಸುತ್ತೆ. ದಯವಿಟ್ಟು ನಿಮ್ಮ ಬ್ಲಾಗ್ ಗಳಿಂದ ನಮ್ಮನ್ನು ದೂರ ಮಾಡಬೇಡಿ. ಕಾಲ ಎಲ್ಲವನ್ನು ಸರಿಪಡಿಸುತ್ತದೆ. ಸಂಯಮದಿಂದ ಇದ್ದರೆ ಎಲ್ಲ ಸರಿ ಹೋಗುತ್ತದೆ.
ನನ್ನ ಮಾತುಗಳಿಂದ ಬೇಸರವಾಗಿದ್ದರೆ ದಯವಿಟ್ಟು ಕ್ಷಮಿಸಿ.

Nandu said...

Shivu,
Phone madappa. Number ideya nannadu ?
Regards

sunaath said...

ಶಿವಶಂಕರ,
ಖಿನ್ನತೆ ಆಗಾಗ ಆವರಿಸೋದು ಸಹಜ. ಮೋಡಗಳು ಕರಗುವಂತೆ, ನಿಮ್ಮ ಖಿನ್ನತೆ ಕರಗಿ ಹೋಗಿ ಮತ್ತೆ ಬೆಳಕು ಬೇಗನೇ ಬರಲಿ. ಬೇಗನೇ ನಿಮ್ಮ ಬ್ಲಾ^ಗಿನ ಬೀಗ ತರೆಯುವಂತಾಗಲಿ. ನಿಮ್ಮ ಜೋಕುಗಳ ಮೂಲಕ ನಿಮ್ಮ ಸಾಮೀಪ್ಯವನ್ನು ನಾವು ಮತ್ತೆ ಸವಿಯುವಂತಾಗಲಿ.
ಆತ್ಮೀಯವಾಗಿ,
-ಸುನಾಥ

ಶರಶ್ಚಂದ್ರ ಕಲ್ಮನೆ said...

ಯಾಕ್ರೀ ಶಿವೂ ಇಷ್ಟೊಂದು ಬೇಸರ? ಖಿನ್ನತೆ ಎಲ್ಲರಿಗೂ ಸಹಜ... ಬರುತ್ತೆ ಹೋಗುತ್ತೆ, ನಿಮಗೆ ಬೇಕಾದಷ್ಟು ಸಮಯ ತೆಗೆದುಕೊಳ್ಳಿ, ನಿಮ್ಮ ಖಿನ್ನತೆ ಕರಗಿದ ಮೇಲೆ ಮತ್ತೆ ನಮ್ಮನ್ನು ನಗಿಸಲು ಬನ್ನಿ... ನೀವು ತೆಗೆದುಕೊಳ್ಳೋ ಸಮಯ ತೀರ ಜಾಸ್ತಿ ಆಗದೆ ಇರಲಿ... ನಿಮ್ಮ ಜೋಕ್ಸ್ ಗಳಿಗಾಗಿ ಕಾಯುತ್ತಿರುತ್ತೇನೆ... ಆದಷ್ಟು ಬೇಗ ಬನ್ನಿ...


ಶರಶ್ಚಂದ್ರ ಕಲ್ಮನೆ

Mahesh said...

ಶಿವು,
ಖಿನ್ನತೆ ಮನುಷ್ಯನಿಗೆ ಆಗಾಗ ಕಾಡೊದು ಸಹಜ.
ಬೇಸರ ಮಾಡಿಕೊಳ್ಳಬೇಡಿ.....
ನಿಮ್ಮ ಖಿನ್ನತೆ ಮಾಯವಾಗಲಿ....
ಹೊಸ ಬೆಳಕು ಬೇಗನೇ ಬರಲಿ....
ಬ್ಲಾಗಿನ ಬೀಗ ತರೆಯಲಿ.....
ನಿಮ್ಮ ಜೋಕುಗಳು ಮತ್ತೆ ಮೂಡಲಿ....

Shashi said...

ಇದೆಲ್ಲ ಸಾಮನ್ಯ ಕಣ್ರೀ. ಇಂತ ಸಮಯದಲ್ಲಿ ಜೀವನದ ಸಿಂಹಾವಲೋಕನ ಮಾಡಿಕೊಂಡು, ಇನ್ನು ಹೆಚ್ಚಿನ ಚೈತನ್ಯ ತುಂಬಿಕೊಂಡು ಮತ್ತೆ ವಾಪಾಸ್ ಬರಬೇಕು. I think we are solely responsible for our lives. One can't escape into void just because one is temporarily confused. Watch some inspirational movies, such as "The Shawshank Redemption", you will come back to normal.
ಬೇಗ ಮರಳಿ ಬರುವಿರೆಂದು ಆಶಿಸುವ ನಿಮ್ಮ ಬ್ಲಾಗ್ ಗೆಳೆಯ, ಶಶಿಧರ.

shobha said...

ನಮಸ್ಕಾರ ಶಿವಶಂಕರ್,
ಹೇಗಿದೀರಿ? ನಿಮ್ಮ ಖಿನ್ನತೆ ಸ್ವಲ್ಪ ಮಟ್ಟಿಗಾದರೂ ಕಡಿಮೆ ಆಯ್ತಾ? ನಮಗಾಗಿಯಾದರು ನೀವು ನಿಮ್ಮ ಖಿನ್ನತೆಯನ್ನು ದೂರಮಾಡಿ, ದಯಮಾಡಿ ಬ್ಲಾಗ್ ಗೆ ಬನ್ನಿ. ಬ್ಲಾಗ್ ನ್ನು ಸಿಂಗರಿಸಿ. ನಮಗೆಲ್ಲಾ ತುಂಬ ಸಂತೋಷವಾಗುತ್ತೆ. ನಿಮ್ಮ ಬರುವಿಕೆಯನ್ನು ಎದುರು ನೋಡುತ್ತಿರುವ ನಿಮ್ಮ ಸ್ನೇಹಿತೆ